ಅಮೆರಿಕದಲ್ಲಿ ಸಾವಯವ ಕೃಷಿ ಪದ್ಧತಿಯಿಂದ ಬೆಳೆದ ಸರಬರಾಜು ಮಾಡಲಾಗಿರುವ ಕ್ಯಾರೆಟ್ ಗಳಲ್ಲಿ ಇ. ಕೋಲಿ ಬ್ಯಾಕ್ಟೀರಿಯಾ ಕಾಣಿಸಿಕೊಂಡಿದ್ದು, ಅದನ್ನು ಸೇವಿಸಿರುವವರು ಭೇದಿ, ಜೀರ್ಣಾಂಗಗಳ ಸೋಂಕು, ಮೂತ್ರ ವಿಸರ್ಜನಾ ಅಂಗಾಂಗಗಳ ಅಸ್ವಸ್ಥತೆಗೆ ಸಿಲುಕಿದ್ದಾರೆ. ವಾಷಿಂಗ್ಟನ್, ಮಿನ್ನಿಸೊಟಾ, ನ್ಯೂಯಾರ್ಕ್ ಸೇರಿದಂತೆ 18 ನಗರಗಳಲ್ಲಿ ಈವರೆಗೆ ಒಟ್ಟು 36 ಮಂದಿ ಈ ಸೋಂಕಿಗೆ ಸಿಲುಕಿದ್ದು ಇವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಅಮೆರಿಕದ ರೋಗ ನಿಯಂತ್ರಣ ಸಂಸ್ಥೆ ತಿಳಿಸಿದೆ
ಇತ್ತೀಚೆಗೆ, ಆರ್ಗ್ಯಾನಿಕ್ ಹಣ್ಣು ತರಕಾರಿಗಳಿಗೆ ಇಡೀ ವಿಶ್ವದಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ, ಅಮೆರಿಕದಲ್ಲಿ ಆರ್ಗ್ಯಾನಿಕ್ ಕ್ಯಾರಟ್ ಗಳಿಂದ ಇ. ಕೋಲಿ ಎಂಬ ಕರುಳಿನ ಸೋಂಕು ಉಂಟಾಗುತ್ತಿದೆ ಎಂದು ಅಮೆರಿಕದ ರೋಗ ನಿಯಂತ್ರಣ ಹಾಗೂ ರೋಗ ನಿರೋಧಕ ಕೇಂದ್ರ ಹೇಳಿದೆ. ವಾಷಿಂಗ್ಟನ್, ಮಿನ್ನೆಸೋಟಾ, ನ್ಯೂಯಾರ್ಕ್ ರಾಜ್ಯ ಸೇರಿದಂತೆ ಅಮೆರಿಕದ 18 ರಾಜ್ಯಗಳಲ್ಲಿ ಈ ಸೋಂಕು ಹರಡಿದೆ ಎಂದು ಸಿಡಿಸಿ ಹೇಳಿದೆ.
ಈವರೆಗೆ 38 ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ. ಸೆ. 6ರಿಂದ ಅ. 28ರವರೆಗಿನ ಅವಧಿಯಲ್ಲಿ ಇವು ದಾಖಲಾಗಿವೆ. ಪ್ರಾಯಶಃ ಆಸ್ಪತ್ರೆಗೆ ದಾಖಲಾಗಿರುವ ಕೇಸ್ ಗಳಿಗಿಂತ ನೈಜ ಸೋಂಕಿತರ ಪ್ರಮಾಣ ಇನ್ನೂ ಅಧಿಕವಿರಬಹುದು ಎಂದು ಹೇಳಿದ್ದಾರೆ. ಕೆಲವರು, ಇ. ಕೋಲಿ ಸೋಂಕಿನ ಪ್ರಮುಖ ಲಕ್ಷಣಗಳಾದ ಹೊಟ್ಟೆನೋವು ಅಥವಾ ಇನ್ನಿತರ ಲಕ್ಷಣಗಳಿಂದ ಬಳಸುತ್ತಿರಬಹುದು. ಅಂಥವರು ಹಲವರು ಇನ್ನೂ ವೈದ್ಯರನ್ನು ಸಂಪರ್ಕಿಸಿರುವುದಿಲ್ಲ. ಹಾಗಾಗಿ, ಒಟ್ಟಾರೆ ಸೋಂಕಿತರ ಬಗ್ಗೆ ಈಗಲೇ ಹೇಳುವುದು ಕಷ್ಟ ಎಂದು ಹೇಳಲಾಗಿದೆ.
ಇ. ಕೋಲಿ ಎಂಬುದು ಮುಖ್ಯವಾಗಿ ಜೀರ್ಣಕ್ರಿಯೆಯ ಅಂಗಾಂಗಗಳಿಗೆ ತಗುಲುವ ಸೋಂಕಾಗಿದೆ. ಇದು ಮುಖ್ಯವಾಗಿ ಕರುಳುಗಳಿಗೆ ತಗುಲುವ ಸೋಂಕು. ಇಶ್ಟೇರಿಚಿಯಾ ಕೋಲಿ ಎಂಬ ಬ್ಯಾಕ್ಟೀರಿಯಾದಿಂದ ಈ ಸೋಂಕು ತಗುಲುತ್ತಿದೆ. ಈ ಸೋಂಕಿಗೆ ಒಳಗಾದವರಿಗೆ ಭೇದಿ, ಮೂತ್ರ ವಿಸರ್ಜನಾ ಅಂಗಾಂಗಗಳ ಉರಿ. ಸೋಂಕು ಮಿತಿಮೀರಿದರೆ ರೋಗಿಯು ತೀವ್ರವಾಗಿ ಅಸ್ವಸ್ಥರಾಗುತ್ತಾನೆ. ಸಕಾಲದಲ್ಲಿ ಸೂಕ್ತ ವೈದ್ಯ ನೆರವು ಸಿಗಲಿಲ್ಲವೆಂದರೆ, ರೋಗಿಯ ಕಾಯಿಲೆ ಉಲ್ಬಣವಾಗಿ ಸಾವಿಗೂ ಕಾರಣವಾಗಬಹುದು.
ಅಮೆರಿಕದಲ್ಲಿ ಗ್ರಿಮ್ ವೇ ಫಾರ್ಮ್ಸ್ ಎಂಬ ಕೃಷಿ ಉತ್ಪನ್ನಗಳ ಮಾರಾಟ ಕಂಪನಿಯೊಂದಿದೆ. ಈ ಕಂಪನಿಯು, ಇಡೀ ವಿಶ್ವದಲ್ಲೇ ಅಧಿಕ ಪ್ರಮಾಣದಲ್ಲಿ ಕ್ಯಾರೆಟ್ ಉತ್ಪಾದಿಸುವ ಹಾಗೂ ಸರಬರಾಜು ಮಾಡುವ ಅತಿದೊಡ್ಡ ಕಂಪನಿ. ಅಮೆರಿಕದ ನಾನಾ ಪಟ್ಟಣಗಳು, ನಗರಗಳಲ್ಲಿನ ತರಕಾರಿ ಅಂಗಡಿಗಳು, ಮಾಲ್ ಗಳಲ್ಲಿ ಇದೇ ಕಂಪನಿಯ ಕ್ಯಾರಟ್ ಗಳೇ ಮಾರಾಟವಾಗುತ್ತವೆ.
ಈಗ ಇದೇ ಕ್ಯಾರಟ್ ಗಳಲ್ಲಿ ಇ. ಕೋಲಿ ಸೋಂಕು ಪತ್ತೆಯಾಗಿರುವುದರಿಂದ ಆ ಕಂಪನಿಯು ಸರಬರಾಜು ಮಾಡಿರುವ ಎಲ್ಲಾ ಕ್ಯಾರಟ್ ಗಳನ್ನು ಹಿಂದಕ್ಕೆ ಪಡೆಯುವಂತೆ ಅಮೆರಿಕ ಸರ್ಕಾರ ಈ ಕಂಪನಿಗೆ ಆದೇಶಿಸಿದೆ. ಸೆ. 11ರಿಂದ 12ರೊಳಗೆ ಬಳಸಬಹುದು ಎಂಬ ಲೇಬಲ್ ಇರುವ ಕ್ಯಾರಟ್ ಗಳಲ್ಲೇ ಸೋಂಕಿನ ಬ್ಯಾಕ್ಟೀರಿಯಾಗಳು ಕಾಣಿಸಿಕೊಂಡಿರುವುದರಿಂದ ಆ ಕ್ಯಾಟಗರಿಯ ಕ್ಯಾರೆಟ್ ಗಳನ್ನು ಮಾತ್ರ ಹಿಂಪಡೆಯುವಂತೆ ಸೂಚಿಸಲಾಗಿದೆ. ಹಾಗಾಗಿ, ಅಮೆರಿಕದ ಅತಿ ದೊಡ್ಡ ಮಾಲ್ ಸರಣಿಯಾದ ಟ್ರೇಡರ್ ಜೋಸ್, ವೇಗ್ಮನ್ಸ್, ಸ್ಪ್ರೌಟ್ಸ್ ಹಾಗೂ ವಾಲ್ ಮಾರ್ಟ್ ಸೇರಿದಂತೆ ಎಲ್ಲಾ ಮಾಲ್ ಗಳಲ್ಲಿ ಹಾಗೂ ಅಧಿಕೃತ ಮಾರಾಟ ಮಳಿಗೆಗಳಲ್ಲಿರುವ ಕ್ಯಾರಟ್ ಗಳನ್ನು ಹಿಂಪಡೆಯಲು ಈ ಕಂಪನಿ ಕ್ರಮ ಕೈಗೊಂಡಿದೆ.