Ashwaveega News 24×7 ಫೆಬ್ರವರಿ 07 -2026 – ಬೆಂಗಳೂರು : ಕರ್ನಾಟಕ ರಾಜಕಾರಣದಲ್ಲಿ ಸಿಎಂ ಸ್ಥಾನವನ್ನು ಸುತ್ತಿಕೊಂಡು ಮತ್ತೊಮ್ಮೆ ಭಾರೀ ಚರ್ಚೆ ಶುರುವಾಗಿದೆ. ಈ ಬಾರಿ ಸಿಎಂ ಸಿದ್ದರಾಮಯ್ಯ ನೇರವಾಗಿಯೇ ಅಖಾಡಕ್ಕೆ ಇಳಿದಿದ್ದು, ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿಯಾಗಿಯೇ ಮುಂದುವರೆಯುವ ದೃಢ ನಿರ್ಧಾರದಲ್ಲಿದ್ದಾರೆ ಎನ್ನುವ ಸಂದೇಶ ಸ್ಪಷ್ಟವಾಗಿ ಹೊರಬರುತ್ತಿದೆ.
“ನಮ್ಮಪ್ಪ ಐದು ವರ್ಷ ಸಿಎಂ ಆಗಿ ಪೂರ್ಣಗೊಳಿಸುತ್ತಾರೆ” ಎಂಬ ಹೇಳಿಕೆಯನ್ನು ಸಿಎಂ ಪುತ್ರ ಹಾಗೂ ಎಂಎಲ್ಸಿ ಡಾ. ಯತೀಂದ್ರ ಅವರ ಬಾಯಿಂದಲೇ ಹೊರಬರುವಂತೆ ಮಾಡಿಸಿರುವುದು ಸಿದ್ದರಾಮಯ್ಯ ಅವರ ರಾಜಕೀಯ ತಂತ್ರದ ಭಾಗವೇ ಆಗಿದೆ .
ಸಿಎಂ ಸಿದ್ದರಾಮಯ್ಯ ಹೇಳಿದ್ದೇ ಈಗ ಕರ್ನಾಟಕ ಕಾಂಗ್ರೆಸ್ನಲ್ಲಿ ಅಂತಿಮ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಹೈಕಮಾಂಡ್ ಈ ವಿಚಾರದಲ್ಲಿ ಮೌನ ವಹಿಸಿರುವುದು ಕುತೂಹಲ ಕೆರಳಿಸಿದೆ. ಹೈಕಮಾಂಡ್ ಪ್ರತಿನಿಧಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೂ ಸಿಎಂ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ರಾಹುಲ್ ಗಾಂಧಿಯ ವಿಶ್ವಾಸ ಮತ್ತು ಕೆ.ಸಿ. ವೇಣುಗೋಪಾಲ್ ಅವರ ನಿರಂತರ ಸಂಪರ್ಕವೇ ಸಿದ್ದರಾಮಯ್ಯ ಅವರ ಪ್ರಮುಖ ಬಲವಾಗಿದೆ. ಹೈಕಮಾಂಡ್ಗೆ ಅಸಮಾಧಾನ ಉಂಟಾಗದಂತೆ ತಂತ್ರ ರೂಪಿಸಿಕೊಂಡಿರುವ ಸಿಎಂ, ತಮ್ಮ ಆಡಳಿತ ಅನುಭವ ಹಾಗೂ ರಾಜಕೀಯ ಚಾಣಾಕ್ಷತೆಯ ಮೂಲಕ ಸಿಎಂ ಕುರ್ಚಿಯನ್ನು ಭದ್ರಪಡಿಸಿಕೊಳ್ಳಲು ಮುಂದಾಗಿದ್ದಾರೆ.
ಡಿಕೆ ಶಿವಕುಮಾರ್ ಎಷ್ಟೇ ಡೈನಾಮಿಕ್ ನಾಯಕರಾಗಿದ್ದರೂ, ಸಿಎಂ ಸ್ಥಾನ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಆಟವೇ ಮೇಲುಗೈ ಸಾಧಿಸುತ್ತಿದೆ ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ. ಅಧಿಕಾರ ಹಸ್ತಾಂತರ ಮಾಡಬೇಕು ಎಂದು ಸಿಎಂಗೆ ಹೇಳುವ ವರಿಷ್ಠರು ಇಲ್ಲ ಎಂಬುದೇ ಸಿದ್ದರಾಮಯ್ಯ ಅವರ ಸ್ಥಿತಿಯನ್ನು ಮತ್ತಷ್ಟು ಬಲಪಡಿಸಿದೆ.
ಒಟ್ಟಾರೆ, ಕರ್ನಾಟಕ ಕಾಂಗ್ರೆಸ್ನಲ್ಲಿ ಸಿಎಂ ಸೀಟ್ ಸುತ್ತಲಿನ ರಾಜಕೀಯ ಇನ್ನಷ್ಟು ತೀವ್ರಗೊಳ್ಳುವ ಲಕ್ಷಣಗಳು ಸ್ಪಷ್ಟವಾಗಿದ್ದು, ಮುಂದಿನ ದಿನಗಳಲ್ಲಿ “ಸಿಎಂ ಸರ್ಕಸ್” ಮತ್ತಷ್ಟು ರೋಚಕವಾಗುವ ಸಾಧ್ಯತೆ ಇದೆ.
