Ashwaveega News 24×7 ಮಾರ್ಚ್ 22 – 2026 : ಬೆಳಗಾವಿ : ಒಂದು ಲಕ್ಷ ರೂಪಾಯಿ ಕೊಟ್ಟರೆ ಎರಡು ಲಕ್ಷ ಖೋಟಾ ನೋಟು ನೀಡುತ್ತಿದ್ದ ಗ್ಯಾಂಗ್ನ್ನು ಬೆಳಗಾವಿ ಮಾರ್ಕೆಟ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಖೋಟಾ ನೋಟು ದಂಧೆ ಗೋವಾ ಜೈಲಿನಿಂದಲೇ ನಡೆಯುತ್ತಿತ್ತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಗೋವಾ ಜೈಲಿನಲ್ಲಿರುವ ಕಿಂಗ್ಪಿನ್ನ ಸೂಚನೆಯಂತೆ ಕರ್ನಾಟಕ ಮತ್ತು ಗೋವಾದಲ್ಲಿ 500 ರೂಪಾಯಿ ಖೋಟಾ ನೋಟುಗಳನ್ನು ಚಲಾವಣೆ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಖಡೇಬಜಾರ್ನ ಅಂಗಡಿಯಲ್ಲಿ ಖೋಟಾ ನೋಟು ಚಲಾವಣೆ ಮಾಡಲು ಯತ್ನಿಸಿದ ವೇಳೆ ಅಂಗಡಿ ಮಾಲೀಕನಿಗೆ ಸಂಶಯ ಉಂಟಾಗಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಅಲರ್ಟ್ ಆಗಿ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮೊಹಮ್ಮದ್ ಅರ್ಬಾಜ್, ರೂಪೇಶ್, ಮೊಹಮ್ಮದ್ ಹುಸೇನ್ ಭಕ್ಷಿ ಹಾಗೂ ಶ್ರವಣಕುಮಾರ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಕಾರು, ಸುಮಾರು 2.40 ಲಕ್ಷ ರೂ. ಮೌಲ್ಯದ ಖೋಟಾ ನೋಟುಗಳು ಹಾಗೂ ನಾಲ್ಕು ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
