Ashwaveega News 24×7 ಜನವರಿ 25 – ತಿರುಪತಿಯ ಪ್ರಸಿದ್ಧ ಲಡ್ಡು ತಯಾರಿಕೆಯಲ್ಲಿ ನಕಲಿ ತುಪ್ಪ ಬಳಸಿರುವುದು ಸಿಬಿಐ ತನಿಖೆಯಲ್ಲಿ ಸ್ಪಷ್ಟವಾಗಿ ದೃಢಪಟ್ಟಿದೆ. ಈ ಸಂಬಂಧ ಸಿಬಿಐ ನೆಲ್ಲೂರು ನ್ಯಾಯಾಲಯಕ್ಕೆ ಅಂತಿಮ ಚಾರ್ಜ್ಶೀಟ್ ಸಲ್ಲಿಸಿದೆ.
ಲಡ್ಡು ತಯಾರಿಕೆಗೆ ಲಕ್ಷಾಂತರ ಲೀಟರ್ಗಳಷ್ಟು ನಕಲಿ ತುಪ್ಪ ಬಳಸಲಾಗಿದ್ದು, ಇದರಿಂದ ಸುಮಾರು 250 ಕೋಟಿ ರೂಪಾಯಿ ಹಣಕಾಸು ಅವ್ಯವಹಾರ ನಡೆದಿರುವುದು ತನಿಖೆಯಿಂದ ಬಯಲಾಗಿದೆ. ಈ ಹಗರಣದಲ್ಲಿ ಟಿಟಿಡಿ ಸಿಬ್ಬಂದಿ ಸೇರಿದಂತೆ ಒಟ್ಟು 36 ಮಂದಿ ಆರೋಪಿಗಳು ಭಾಗಿಯಾಗಿದ್ದಾರೆ.
ಆರೋಪಿಗಳಲ್ಲಿ ಡೈರಿ ಮಾಲೀಕರು, ಟಿಟಿಡಿಯ ಮಾಜಿ ಅಧಿಕಾರಿಗಳು ಕೂಡ ಸೇರಿದ್ದಾರೆ. ಕಳೆದ 15 ತಿಂಗಳುಗಳ ಕಾಲ 12 ರಾಜ್ಯಗಳಲ್ಲಿ ಸಿಬಿಐ ವ್ಯಾಪಕ ತನಿಖೆ ನಡೆಸಿದ್ದು, ಶುದ್ಧ ತುಪ್ಪದ ಬದಲಿಗೆ ಪಾಮ್ ಆಯಿಲ್, ಕರ್ನಲ್ ಆಯಿಲ್ ಹಾಗೂ ವಿವಿಧ ರಾಸಾಯನಿಕ ಮಿಶ್ರಣಗಳನ್ನು ಲಡ್ಡು ತಯಾರಿಕೆಗೆ ಬಳಸಲಾಗಿದೆ ಎಂಬುದು ಪತ್ತೆಯಾಗಿದೆ.
ಶುದ್ಧ ತುಪ್ಪದಂತೆ ಕಾಣುವಂತೆ ಮಾಡಲು ವಿಶೇಷ ಕೆಮಿಕಲ್ಗಳನ್ನು ಕೂಡ ಮಿಶ್ರಣ ಮಾಡಲಾಗುತ್ತಿತ್ತು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಈ ನಕಲಿ ತುಪ್ಪವನ್ನು ಉತ್ತರಾಖಂಡ ಮೂಲದ ಕಂಪನಿಯೊಂದು ಪೂರೈಸಿದ್ದು, ಭೋಲೇ ಬಾಬಾ ಆರ್ಗ್ಯಾನಿಕ್ ಡೈರಿ ಇದರ ಕೇಂದ್ರ ಪಾತ್ರವಹಿಸಿದೆ.
ಕಂಪನಿಯ ಡೈರೆಕ್ಟರ್ ಪೋಮಿಲ್ ವಿಪಿನ್ ಜೈನ್ ಈ ಪ್ರಕರಣದ ಪ್ರಮುಖ ಆರೋಪಿ ಎಂದು ಸಿಬಿಐ ಸ್ಪಷ್ಟಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.
