Ashwaveega News 24×7 ಜನವರಿ 19 – ಶಿವಮೊಗ್ಗ: ನಗರದ ಬಿಎಚ್ ರಸ್ತೆ ವ್ಯಾಪ್ತಿಯ ಕರ್ನಾಟಕ ಸಂಘದ ಸಮೀಪ ಭಾನುವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಬಟ್ಟೆ ಅಂಗಡಿ ಹಾಗೂ ಅದಕ್ಕೆ ಸೇರಿದ್ದ ಜ್ಯೂಸ್ ಅಂಗಡಿ ಸಂಪೂರ್ಣವಾಗಿ ಸುಟ್ಟು ಕರುಕಲಾಗಿದೆ.
ಮಹಮ್ಮದ್ ಜಿಶಾನ್ ಅವರಿಗೆ ಸೇರಿದ ಈ ಬಟ್ಟೆ ಅಂಗಡಿಯಲ್ಲಿ ವರ್ಷ ಹಿಂದೆ ಜ್ಯೂಸ್ ಅಂಗಡಿಯನ್ನು ಆರಂಭಿಸಲಾಗಿತ್ತು. ಭಾನುವಾರದ ಹಿನ್ನಲೆಯಲ್ಲಿ ಎರಡೂ ಅಂಗಡಿಗಳು ಬಂದ್ ಆಗಿದ್ದ ಸಂದರ್ಭದಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಬೆಂಕಿ ಅವಘಡದಿಂದ ಅಂಗಡಿಗಳಲ್ಲಿದ್ದ ಬಟ್ಟೆ, ಯಂತ್ರೋಪಕರಣಗಳು ಹಾಗೂ ಇತರ ಸಾಮಗ್ರಿಗಳು ಸಂಪೂರ್ಣವಾಗಿ ಭಸ್ಮವಾಗಿದ್ದು, ಸುಮಾರು ₹10 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ನಷ್ಟವಾಗಿವೆ ಎಂದು ಅಂದಾಜಿಸಲಾಗಿದೆ.

ಜ್ಯೂಸ್ ಅಂಗಡಿಯೊಳಗೆ ಐದು ಕೆಜಿ ತೂಕದ ಸಣ್ಣ ಗ್ಯಾಸ್ ಸಿಲಿಂಡರ್ ಇದ್ದರೂ, ಅದೃಷ್ಟವಶಾತ್ ಸಿಲಿಂಡರ್ ಖಾಲಿಯಾಗಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದಿದೆ ಎಂದು ಹೇಳಲಾಗಿದೆ.
ಮಾಹಿತಿ ದೊರಕುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದು ಹೆಚ್ಚಿನ ಹಾನಿ ಆಗುವುದನ್ನು ತಡೆದಿದ್ದಾರೆ. ಅಂಗಡಿ ಮಾಲೀಕರು, ಅಂಗಡಿಯ ಹಿಂದೆ ಇರುವ ಖಾಲಿ ಜಾಗದಲ್ಲಿ ಬಿದ್ದಿದ್ದ ಕಸಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರಿಂದಲೇ ಅಂಗಡಿಗೆ ಬೆಂಕಿ ತಗುಲಿದೆ ಎಂದು ಆರೋಪಿಸಿದ್ದಾರೆ.
ಈ ಘಟನೆ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಗ್ನಿ ಅವಘಡದ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ.
