Ashwaveega News 24×7 ಫೆಬ್ರವರಿ 08 -2026 – ಕೋಲಾರ : ಶ್ರೀನಿವಾಸಪುರದಲ್ಲಿ ಮನಕಲಕುವ ಹಾಗೂ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಐದು ದಿನಗಳ ಹಸುಗೂಸನ್ನು ಎರಡು ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಆರೋಪದಲ್ಲಿ ಪೋಷಕರು ಹಾಗೂ ಮಧ್ಯವರ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶ್ರೀನಿವಾಸಪುರದ ನೀತು ಮತ್ತು ರಾಘವೇಂದ್ರ ದಂಪತಿಗೆ ಗಂಡು ಮಗು ಜನಿಸಿದ್ದು, ಐದು ದಿನಗಳ ಹಿಂದೆ ಖಾಸಗಿ ನರ್ಸಿಂಗ್ ಹೋಂನಲ್ಲಿ ಮಗು ಜನಿಸಿತ್ತು. ಆರ್ಥಿಕ ಸಂಕಷ್ಟದ ಹಿನ್ನೆಲೆ ದಂಪತಿ ತಮ್ಮದೇ ಮಗುವನ್ನು ಮಾರಾಟ ಮಾಡಲು ಮುಂದಾದರು ಎನ್ನಲಾಗಿದೆ.
ಮಕ್ಕಳ ಮಾರಾಟ ಜಾಲದ ಮಧ್ಯವರ್ತಿ ನಾರಾಯಣಸ್ವಾಮಿ ಮೂಲಕ ಈ ಹಸುಗೂಸನ್ನು ಚಿಂತಾಮಣಿ ಮೂಲದ ವ್ಯಕ್ತಿಗೆ ಎರಡು ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಈ ವಿಷಯ ಪೊಲೀಸರಿಗೆ ತಿಳಿಯುತ್ತಿದ್ದಂತೆ ಶ್ರೀನಿವಾಸಪುರ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿದ್ದು, ತಡರಾತ್ರಿ ಪೋಷಕರನ್ನು ಹಾಗೂ ಮಧ್ಯವರ್ತಿಯನ್ನು ವಿಚಾರಣೆಗೆ ಒಳಪಡಿಸಿ ಖಾಕಿ ವಶಕ್ಕೆ ಪಡೆದಿದ್ದಾರೆ. ತ್ವರಿತ ಕಾರ್ಯಾ ಚರಣೆಯಿಂದ ಹಸುಗೂಸನ್ನು ಸುರಕ್ಷಿತವಾಗಿ ರಕ್ಷಿಸಿದ ಪೊಲೀಸರು, ಮಗುವನ್ನು ಪೋಷಕರಿಗೆ ವಾಪಸ್ ಒಪ್ಪಿಸಿದ್ದಾರೆ.
ಮಕ್ಕಳ ಮಾರಾಟಕ್ಕೆ ಸಂಬಂಧಿಸಿದಂತೆ ಇದು ಸಂಘಟಿತ ಜಾಲವೇ ಎಂಬ ಅನುಮಾನ ವ್ಯಕ್ತವಾಗಿದ್ದು, ಮಧ್ಯವರ್ತಿಯ ಹಿನ್ನೆಲೆ ಹಾಗೂ ಇತರ ಸಂಪರ್ಕಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಘಟನೆ ಇಡೀ ಜಿಲ್ಲೆಯಲ್ಲಿ ಆಘಾತ ಮೂಡಿಸಿದ್ದು, ಮಕ್ಕಳ ಹಕ್ಕುಗಳ ರಕ್ಷಣೆ ಹಾಗೂ ಇಂತಹ ಅಪರಾಧಗಳ ವಿರುದ್ಧ ಕಠಿಣ ಕ್ರಮ ಅಗತ್ಯ ಎಂಬ ಚರ್ಚೆಗೆ ಕಾರಣವಾಗಿದೆ.
