
The four Asiatic elephants are headed to Himeji Central Park in Japan.
Ashwaveega News 24×7 ಜು. 25: ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಬನ್ನೇರುಘಟ್ಟ ಜೈವಿಕ ಉದ್ಯಾನದ ನಾಲ್ಕು ಆನೆಗಳನ್ನು ಗುರುವಾರ ವಿಮಾನದ ಮೂಲಕ ಜಪಾನ್ಗೆ ಕಳುಹಿಸಿಕೊಡಲಾಯಿತು. ‘ಬನ್ನೇರುಘಟ್ಟ ಉದ್ಯಾನವು ಜಪಾನ್ನ ಹಿಮೇಜಿ ಸೆಂಟ್ರಲ್ ಪಾರ್ಕ್ನೊಂದಿಗೆ ಪ್ರಾಣಿ ವಿನಿಮಯ ಒಪ್ಪಂದ ಮಾಡಿಕೊಂಡಿದೆ.
ಸುರೇಶ್ (8 ವರ್ಷ), ಗೌರಿ (9 ವರ್ಷ), ಶ್ರುತಿ (7 ವರ್ಷ) ಮತ್ತು ತುಳಸಿ (5 ವರ್ಷ) ಎಂಬ ಆನೆಗಳನ್ನು ಜಪಾನ್ನ ಹಿಮೇಜಿ ಸೆಂಟ್ರಲ್ ಪಾರ್ಕ್ಗೆ ಕೊಡಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಹಿಮೇಜಿ ಸೆಂಟ್ರಲ್ ಪಾರ್ಕ್ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ತಲಾ ನಾಲ್ಕು ಚಿರತೆಗಳು, ಜಾಗ್ವಾರ್ಗಳು, ಪೂಮಾಗಳು, ಮೂರು ಚಿಂಪಾಂಜಿಗಳು ಮತ್ತು ಎಂಟು ಕ್ಯಾಪುಚಿನ್ ಕೋತಿಗಳನ್ನು ಹಸ್ತಾಂತರಿಸಲಿದೆ,” ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ಅಧಿಕಾರಿ ವಿಶಾಲ್ ಸೂರ್ಯ ಸೇನ್ ತಿಳಿಸಿದ್ದಾರೆ.
ಆನೆಗಳನ್ನು ಕ್ರಾಲ್ನಲ್ಲಿ ಇರಿಸಿ ಲಾರಿಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿಸಲಾಯಿತು. ರಾತ್ರಿ 8 ಗಂಟೆ ಸುಮಾರಿಗೆ ಕತಾರ್ ಏರ್ವೇಸ್ನ ಸರಕು ಸಾಗಣೆ ವಿಮಾನದಲ್ಲಿಆನೆಗಳನ್ನು ಕೊಂಡೊಯ್ಯಲಾಯಿತು.
ವಿಮಾನದಲ್ಲಿ 8 ಗಂಟೆ ಪ್ರಯಾಣ ಬೆಳೆಸಿ ಆನೆಗಳು ಜಪಾನ್ನ ಒಸಾಕಾದ ಕನ್ಸಾಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿವೆ. ಅಲ್ಲಿಂದ ಹಿಮೇಜಿ ಸೆಂಟ್ರಲ್ ಪಾರ್ಕ್ಗೆ ರಸ್ತೆ ಮಾರ್ಗದಲ್ಲಿ ತಲುಪಲಿವೆ. ಒಟ್ಟಾರೆ 20 ಗಂಟೆಗಳ ಕಾಲ ಪ್ರಯಾಣದ ಮೂಲಕ ಆನೆಗಳನ್ನು ತಲುಪಿಸುವ ಗುರಿ ಹೊಂದಲಾಗಿದೆ.
ಹಿಮೇಜಿ ಸೆಂಟ್ರಲ್ ಪಾರ್ಕ್ನ ಇಬ್ಬರು ಪಶುವೈದ್ಯರು ಮತ್ತು ಬನ್ನೇರುಘಟ್ಟ ಜೈವಿಕ ಉದ್ಯಾನದ ಇಬ್ಬರು ಪಶು ವೈದ್ಯಕೀಯ ಅಧಿಧಿಕಾರಿಗಳು, ನಾಲ್ವರು ಪಾಲಕರು, ಒಬ್ಬ ಮೇಲ್ವಿಚಾರಕ ಮತ್ತು ಒಬ್ಬರು ಜೀವಶಾಸ್ತ್ರಜ್ಞೆ ಸೇರಿದಂತೆ ಒಟ್ಟು ಎಂಟು ಮಂದಿ ಆನೆಗಳೊಂದಿಗೆ ಪ್ರಯಾಣ ಬೆಳೆಸಿದ್ದಾರೆ. ಬನ್ನೇರುಘಟ್ಟದ ತಂಡವು ಎರಡು ವಾರಗಳ ಕಾಲ ಹಿಮೇಜಿ ಸೆಂಟ್ರಲ್ ಪಾರ್ಕ್ನಲ್ಲಿ ತಂಗಿ, ಆನೆಗಳು ಹೊಸ ಪರಿಸರಕ್ಕೆ ಹೊಂದಿಕೊಳ್ಳುವಂತೆ ತರಬೇತಿ ನೀಡಲಿದೆ.
2021ರಲ್ಲಿ ಮೈಸೂರು ಮೃಗಾಲಯದಿಂದ ಜಪಾನ್ನ ಟೊಯೊಹಾಶಿ ಮೃಗಾಲಯಕ್ಕೆ ಮೂರು ಆನೆಗಳನ್ನು ಕಳುಹಿಸಲಾಗಿತ್ತು. ಎರಡನೇ ಬ್ಯಾಚ್ನಲ್ಲಿ ಆನೆಗಳನ್ನು ಈಗ ಕಳುಹಿಸಿಕೊಡಲಾಗುತ್ತಿದೆ.