Ashwaveega News 24×7 ಮಾರ್ಚ್ 11 – 2026 : ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿಯ ಪರಿಣಾಮ ದೇಶದಲ್ಲಿಯೂ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ಗಮನಕ್ಕೆ ಬಂದಿದೆ. ವಿಶೇಷವಾಗಿ ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಹಿನ್ನೆಲೆ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಸಮಸ್ಯೆ ಎದುರಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ಗಳು ಔಟ್ ಆಫ್ ಸ್ಟಾಕ್ ಆಗಿರುವುದಾಗಿ ಹೋಟೆಲ್ ಮಾಲೀಕರು ಆರೋಪಿಸಿದ್ದಾರೆ. ನಗರಕ್ಕೆ ಕಳೆದ ಒಂದು ದಿನದಿಂದಲೂ ಕಮರ್ಷಿಯಲ್ ಸಿಲಿಂಡರ್ಗಳ ಸರಬರಾಜು ಸರಿಯಾಗಿ ಆಗುತ್ತಿಲ್ಲ …
ಹೋಟೆಲ್, ರೆಸ್ಟೋರೆಂಟ್ಗಳು ಹಾಗೂ ಆಹಾರ ವ್ಯಾಪಾರ ನಡೆಸುವವರು ಹೆಚ್ಚಾಗಿ ಬಳಸುವ ಕಮರ್ಷಿಯಲ್ ಸಿಲಿಂಡರ್ಗಳ ಪೂರೈಕೆ ಸ್ಥಗಿತಗೊಂಡಿರುವುದರಿಂದ ವ್ಯಾಪಾರಿಗಳಿಗೆ ತೀವ್ರ ಸಂಕಷ್ಟ ಎದುರಾಗಿದೆ. “ಸಿಲಿಂಡರ್ ಇಲ್ಲದೆ ಹೋಟೆಲ್ ವ್ಯವಹಾರ ನಡೆಸುವುದು ಹೇಗೆ ?” ಎಂದು ಹೋಟೆಲ್ ಮಾಲೀಕರು ಪ್ರಶ್ನೆ ಮಾಡಿದ್ದಾರೆ.
ಕೆಲವರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಇಂತಹ ಪರಿಸ್ಥಿತಿಯಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕಾಗಿತ್ತು ಎಂದು ಕಿಡಿಕಾರಿದ್ದಾರೆ. ಯುದ್ಧದ ಪರಿಣಾಮದಿಂದ ತೈಲ ಮತ್ತು ಗ್ಯಾಸ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ .
ಆದರೆ ಹಲವೆಡೆ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಪೂರೈಕೆ ಸಾಮಾನ್ಯವಾಗಿ ಮುಂದುವರಿದಿದ್ದು, ಮನೆ ಬಳಕೆದಾರರಿಗೆ ಹೆಚ್ಚಿನ ಸಮಸ್ಯೆ ಉಂಟಾಗಿಲ್ಲ ಎಂದು ವಿತರಕರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಮಧ್ಯಪ್ರಾಚ್ಯದ ಯುದ್ಧದ ಪರಿಣಾಮ ದೇಶದ ವಾಣಿಜ್ಯ ವಲಯದ ಮೇಲೆ ಕಾಣಿಸಿಕೊಳ್ಳಲು ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಗ್ಯಾಸ್ ಪೂರೈಕೆ ಹೇಗೆ ಇರುತ್ತದೆ ಎಂಬುದರ ಬಗ್ಗೆ ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ .
