Ashwaveega News 24×7 ಮಾರ್ಚ್ 14– 2026 : ರಾಜ್ಯದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ ಜನರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ. ವಿಶೇಷವಾಗಿ ಬೆಳಗಾವಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಗೃಹೋಪಯೋಗಿ ಸಿಲಿಂಡರ್ ಸಿಗದೇ ಜನರು ಪರದಾಡುತ್ತಿರುವ ದೃಶ್ಯ ಕಂಡುಬಂದಿದೆ.
ಬೆಳಗಾವಿಯಲ್ಲಿ ಗ್ಯಾಸ್ ಏಜೆನ್ಸಿಗಳ ಕಚೇರಿಗಳ ಮುಂದೆ “ನೋ ಸ್ಟಾಕ್” ಎಂಬ ಬೋರ್ಡ್ ಹಾಕಲಾಗಿದೆ. ಸಿಲಿಂಡರ್ ಬುಕ್ ಮಾಡಿದರೂ ಸಹ ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಸಿಲಿಂಡರ್ ದೊರೆಯುತ್ತಿಲ್ಲ ಎಂದು ಜನರು ಆರೋಪಿಸಿದ್ದಾರೆ.
“ನಾಳೆ ಮನೆಯಲ್ಲಿ ಕಾರ್ಯಕ್ರಮ ಇದೆ, ಆದರೆ ಗ್ಯಾಸ್ ಸಿಗುತ್ತಿಲ್ಲ,” ಎಂದು ಹಲವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವರು ಬುಕಿಂಗ್ ಮಾಡಿಕೊಂಡಿದ್ದರೂ ಸಿಬ್ಬಂದಿ “ಇನ್ನೂ 8 ದಿನಗಳ ನಂತರ ಬನ್ನಿ” ಎಂದು ಹೇಳುತ್ತಿದ್ದಾರೆ ಎಂದು ಜನರು ಆರೋಪಿಸಿದ್ದಾರೆ. ಇದರಿಂದ ಗ್ಯಾಸ್ ಸಿಗದೇ ಕಾದು ಕಾದು ಕೊನೆಗೆ ಖಾಲಿ ಕೈಯಲ್ಲಿ ಮನೆಗೆ ವಾಪಸ್ ಹೋಗುವ ಪರಿಸ್ಥಿತಿ ಉಂಟಾಗಿದೆ.
ಇದೇ ಸಮಸ್ಯೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಕಾಣಿಸಿಕೊಂಡಿದೆ. ಪೆರೇಸಂದ್ರ ಪ್ರದೇಶದಲ್ಲಿ ಸಿಲಿಂಡರ್ ಪಡೆಯಲು ಜನರು ಬೆಳಗ್ಗೆ 6 ಗಂಟೆಯಿಂದಲೇ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಆದರೂ ಹಲವರಿಗೆ ಸಿಲಿಂಡರ್ ದೊರೆಯದೆ ನಿರಾಶೆಯಿಂದ ಹಿಂತಿರುಗಬೇಕಾದ ಪರಿಸ್ಥಿತಿ ಎದುರಾಗಿದೆ.
ಬೆಳಗ್ಗೆಯಿಂದಲೇ ಕಾದು ಕಾದು ಸುಸ್ತಾದ ನೂರಾರು ಜನರು ಗ್ಯಾಸ್ ಏಜೆನ್ಸಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಲಿಂಡರ್ ಬುಕ್ಕಿಂಗ್ ಆಗುತ್ತಿಲ್ಲ ಮತ್ತು ಸರಬರಾಜು ಸರಿಯಾಗಿ ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಯುದ್ಧ ಪರಿಸ್ಥಿತಿಯ ಪರಿಣಾಮವಾಗಿ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ ಎಂಬ ಮಾತು ಕೇಳಿಬರುತ್ತಿದ್ದು, ಸಮಸ್ಯೆ ಶೀಘ್ರ ಪರಿಹರಿಸಬೇಕೆಂದು ಜನರು ಸರ್ಕಾರವನ್ನು ಆಗ್ರಹಿಸಿದ್ದಾರೆ.
