Ashwaveega News 24×7 ಫೆಬ್ರವರಿ 02-2026 : ವಿದೇಶದಿಂದ ಭಾರತಕ್ಕೆ ಪ್ರಯಾಣಿಸುವ ಭಾರತೀಯರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ . ಚಿನ್ನದ ಬ್ಯಾಗೇಜ್ ನಿಯಮಗಳಲ್ಲಿ ಮಹತ್ವದ ಸಡಿಲಿಕೆ ಮಾಡಿ ಹೊಸ ರೂಲ್ಸ್ ಜಾರಿ ಮಾಡಲಾಗಿದೆ. ಫೆಬ್ರವರಿ 2ರಿಂದಲೇ ಈ ನಿಯಮಗಳು ಜಾರಿಯಾಗಿವೆ.
ಹೊಸ ನಿಯಮಗಳ ಪ್ರಕಾರ, ಮಹಿಳೆಯರು ಇನ್ಮುಂದೆ 40 ಗ್ರಾಂವರೆಗೂ ಚಿನ್ನವನ್ನು ಸುಂಕವಿಲ್ಲದೇ ವಿದೇಶದಿಂದ ತರಬಹುದಾಗಿದೆ. ಅದೇ ರೀತಿ ಪುರುಷರಿಗೆ 20 ಗ್ರಾಂ ಚಿನ್ನವನ್ನು ಕಸ್ಟಮ್ಸ್ ಡ್ಯೂಟಿ ಇಲ್ಲದೇ ತರಲು ಅವಕಾಶ ನೀಡಲಾಗಿದೆ.
ಈಗಾಗಲೇ ಇದ್ದ ನಿಯಮಗಳಲ್ಲಿ ಮಹಿಳೆಯರಿಗೆ ಕೇವಲ 1 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಪುರುಷರಿಗೆ 50 ಸಾವಿರ ರೂಪಾಯಿ ಮೌಲ್ಯದ ಚಿನ್ನ ತರಲು ಮಾತ್ರ ಅವಕಾಶ ಇತ್ತು. ಆದರೆ ಚಿನ್ನದ ಬೆಲೆಗಳು ದಾಖಲೆ ಮಟ್ಟ ತಲುಪುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಜಾಗತಿಕ ಆರ್ಥಿಕ ಪಲ್ಲಟಗಳನ್ನು ಗಮನಿಸಿ ಕೇಂದ್ರ ಸರ್ಕಾರ ಈ ಹೊಸ ನಿರ್ಧಾರ ಕೈಗೊಂಡಿದೆ.
ಆದರೆ, ಈ ಸಡಿಲಿಕೆಗೆ ಒಂದೇ ಒಂದು ಮಹತ್ವದ ಷರತ್ತು ವಿಧಿಸಲಾಗಿದೆ. ವಿದೇಶದಿಂದ ತರಲಾಗುವ ಚಿನ್ನ ಆಭರಣ ರೂಪದಲ್ಲೇ ಇರಬೇಕು. ಚಿನ್ನದ ಕಡ್ಡಿ, ಬಿಸ್ಕೆಟ್ ಅಥವಾ ನಾಣ್ಯದ ರೂಪದಲ್ಲಿ ಚಿನ್ನ ತರಲು ಅವಕಾಶವಿಲ್ಲ.
ಇನ್ನು ಈ ಚಿನ್ನವನ್ನು ವೈಯಕ್ತಿಕ ಬಳಕೆಗೆ ಮಾತ್ರ ತರಬೇಕು ಎಂಬ ನಿಯಮವೂ ಅನಿವಾರ್ಯವಾಗಿದೆ. ವಾಣಿಜ್ಯ ಉದ್ದೇಶಕ್ಕೆ ಚಿನ್ನ ತರುವಂತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಚಿನ್ನದ ಬೆಲೆ ದಿನೇದಿನೇ ಗಗನಕ್ಕೇರುತ್ತಿರುವ ಸಂದರ್ಭದಲ್ಲಿ ಕೇಂದ್ರದ ಈ ನಿರ್ಧಾರವು ವಿದೇಶ ಪ್ರಯಾಣಿಸುವವರಿಗೆ ಹಾಗೂ ಚಿನ್ನ ಪ್ರಿಯರಿಗೆ ದೊಡ್ಡ ರಿಲೀಫ್ ಎನ್ನಲಾಗಿದೆ.
