Ashwaveega News 24×7 ಫೆಬ್ರವರಿ 2026 : ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಸತತ ನಾಲ್ಕನೇ ದಿನವೂ ಕುಸಿತ ಮುಂದುವರೆದಿದ್ದು, ಮಾರುಕಟ್ಟೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬೆಳ್ಳಂಬೆಳಗ್ಗೆಯೇ ಚಿನ್ನದ ಬೆಲೆಯಲ್ಲಿ 6 ಸಾವಿರ ರೂಪಾಯಿ ಇಳಿಕೆ ಕಂಡುಬಂದಿದ್ದು, 10 ಗ್ರಾಂ ಶುದ್ಧ ಚಿನ್ನದ ದರ ₹1.52 ಲಕ್ಷಕ್ಕೆ ಕುಸಿದಿದೆ.
ಬಂಗಾರ ಮಾತ್ರವಲ್ಲದೆ ಬೆಳ್ಳಿ ಬೆಲೆಯಲ್ಲೂ ಭಾರಿ ಇಳಿಕೆ ದಾಖಲಾಗಿದೆ. ಇಂದು ಬೆಳಗ್ಗೆಯೇ ಬೆಳ್ಳಿ ದರದಲ್ಲಿ 16 ಸಾವಿರ ರೂಪಾಯಿ ಡೌನ್ ಆಗಿದ್ದು, ಸದ್ಯ 1 ಕೆಜಿ ಬೆಳ್ಳಿ ಬೆಲೆ ₹2.62 ಲಕ್ಷ ರೂಪಾಯಿಗೆ ಇಳಿಕೆಯಾಗಿದೆ. ಕೆಲವೇ ದಿನಗಳ ಹಿಂದೆ ದಾಖಲೆ ಮಟ್ಟ ತಲುಪಿದ್ದ ಚಿನ್ನ–ಬೆಳ್ಳಿ ದರಗಳು ಇದೀಗ ದಿಢೀರ್ ಕುಸಿತ ಕಂಡಿರುವುದು ವ್ಯಾಪಾರಿಗಳಿಗೂ ಗ್ರಾಹಕರಿಗೂ ಅಚ್ಚರಿ ಮೂಡಿಸಿದೆ.
ಮಾರುಕಟ್ಟೆ ತಜ್ಞರ ಪ್ರಕಾರ, ಅಂತರರಾಷ್ಟ್ರೀಯ ಮಾರುಕಟ್ಟೆಯ ಏರುಪೇರು, ಹೂಡಿಕೆದಾರರ ಲಾಭ ವಸೂಲಾತಿ ಮತ್ತು ಡಾಲರ್ ಮೌಲ್ಯದ ಚಲನೆಯೇ ಈ ಇಳಿಕೆಗೆ ಪ್ರಮುಖ ಕಾರಣಗಳಾಗಿವೆ. ಸಂಜೆ ಹೊತ್ತಿಗೆ ಚಿನ್ನ–ಬೆಳ್ಳಿ ಬೆಲೆ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎನ್ನುವ ಅಂದಾಜುಗಳು ಕೂಡ ವ್ಯಕ್ತವಾಗುತ್ತಿವೆ.
ಬೆಲೆ ಇನ್ನಷ್ಟು ಕುಸಿಯುವ ನಿರೀಕ್ಷೆಯಿಂದ ನಿನ್ನೆಯಿಂದಲೇ ಚಿನ್ನಾಭರಣ ವ್ಯಾಪಾರದ ಕೇಂದ್ರವಾದ ಚಿನಿವಾರ ಪೇಟೆಯಲ್ಲಿ ಖರೀದಿ ಕಡಿಮೆಯಾಗಿದೆ. “ಈಗ ಬರಿ ಸೆಲ್ ಮಾಡ್ತೇವೆ… ಬೈ ಮಾಡಲ್ಲ” ಎನ್ನುವ ನಿಲುವನ್ನು ಹೆಚ್ಚಿನ ವರ್ತಕರು ತೆಗೆದುಕೊಂಡಿದ್ದು, ಮಾರುಕಟ್ಟೆಯಲ್ಲಿ ಖರೀದಿಗಿಂತ ಮಾರಾಟವೇ ಹೆಚ್ಚಾಗಿದೆ.
ಒಟ್ಟಾರೆ, ಚಿನ್ನ–ಬೆಳ್ಳಿ ಮಾರುಕಟ್ಟೆ ತೀವ್ರ ಅನಿಶ್ಚಿತತೆಯ ಹಂತದಲ್ಲಿದ್ದು, ಮುಂದಿನ ಕೆಲ ಗಂಟೆಗಳು ಹಾಗೂ ದಿನಗಳು ದರದ ದಿಕ್ಕನ್ನು ನಿರ್ಧರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿವೆ. ಗ್ರಾಹಕರು ಮತ್ತು ಹೂಡಿಕೆದಾರರು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.
