ತಿರುವನಂತಪುರಂ: ಕೇರಳದ ಶಬರಿಮಲೆ ದೇವಸ್ಥಾನಕ್ಕೆ ತೆರಳುವ ಯಾತ್ರಾರ್ಥಿಗಳು ವಿಮಾನಗಳ ಕ್ಯಾಬಿನ್ ಬ್ಯಾಗ್ನಲ್ಲಿ `ಇರುಮುಡಿ’ಯನ್ನು ಸಾಗಿಸಬಹುದು ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ತಿಳಿಸಿದ್ದು, ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡ ಅವರು, ನವೆಂಬರ್ ಮಧ್ಯದಿಂದ ಜನವರಿಯ ಕೊನೆಯವರೆಗೆ ಶಬರಿಮಲೆಗೆ ಯಾತ್ರಾರ್ಥಿಗಳು ತೆರಳುತ್ತಾರೆ. 2025ರ ಜನವರಿ 20ರವರೆಗೆ ಯತಾರ್ಥಿಗಳು ವಿಮಾನಗಳ ಕ್ಯಾಬಿನ್ ಬ್ಯಾಗ್ನಲ್ಲಿ ತೆಂಗಿನಕಾಯಿಯನ್ನು ತೆಗೆದುಕೊಂಡು ಪ್ರಯಾಣಿಸಬಹುದು ಹಾಗೂ ಈ ಸೀಮಿತ ಅವಧಿಯಲ್ಲಿ ಮಾತ್ರ ತೆಗೆದುಕೊಂಡು ಹೋಗಲು ಅನುಮತಿಸಲಾಗಿದೆ ಎಂದು ತಿಳಿಸಿದರು.
ಸದ್ಯದ ನಿಯಮಗಳ ಪ್ರಕಾರ ವಿಮಾನಗಳ ಕ್ಯಾಬಿನ್ ಬ್ಯಾಗ್ನಲ್ಲಿ ತೆಂಗಿನಕಾಯಿ ತೆಗೆದುಕೊಂಡು ಹೋಗಲು ಅನುಮತಿಯಿಲ್ಲ. ಶಬರಿಮಲೆಗೆ ಹೋಗುವವರಿಗೆ ಯಾತ್ರೆ ಸುಲಭವಾಗಿರಲಿ ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆಯ ಅವಧಿಯಲ್ಲಿ `ಇರುಮುಡಿ’ಯಲ್ಲಿ (ತುಪ್ಪ ತುಂಬಿದ ತೆಂಗಿನಕಾಯಿ ಸೇರಿದಂತೆ ಅರ್ಪಣೆಗಳನ್ನು ಹೊಂದಿರುವ ಪವಿತ್ರ) ತೆಂಗಿನಕಾಯಿಯನ್ನು ಸಾಗಿಸಲು ವಿನಾಯಿತಿ ನೀಡಲಾಗಿದೆ ಎಂದು ಹೇಳಿದ್ದಾರೆ. ಈ ಆದೇಶವು 2025ರ ಜನವರಿ 20ರವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಅಗತ್ಯವಿರುವ ಎಕ್ಸ್-ರೇ, ಇಟಿಡಿ (ಎಕ್ಸ್ಪ್ಲೋಸಿವ್ ಟ್ರೇಸ್ ಡಿಟೆಕ್ಟರ್) ಮತ್ತು ಭೌತಿಕ ತಪಾಸಣೆ ಹೀಗೆ ಭದ್ರತಾ ತಪಾಸಣೆಗಳ ಬಳಿಕವೇ ಅನುಮತಿ ನೀಡಲಾಗುವುದು ಎಂದಿದ್ದಾರೆ.