ಬೆಂಗಳೂರು : ಮೆಟ್ರೋ ಹಸಿರು ವಿಭಾಗದ ನಾಗಸಂದ್ರ – ಮಾದಾವರ ವಿಸ್ತರಿತ ಮಾರ್ಗ ಇಂದಿನಿಂದ ಸಾರ್ವಜನಿಕರ ಸೇವೆಗೆ ಲಭ್ಯವಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಬೆಂಗಳೂರಿನ ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಯಶವಂತಪುರದಿಂದ ಮಾದಾವರದವರೆಗೆ ಪ್ರಾಯೋಗಿಕ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದಾರೆ.
ಇಂದು ಬೆಳಗ್ಗೆ 5 ಗಂಟೆಗೆಯಿಂದ ಮಾದಾವರದಿಂದ ಮೊದಲ ಮೆಟ್ರೋ ಸೇವೆ ಆರಂಭವಾಗಿದ್ದು, ರಾತ್ರಿ 11 ಗಂಟೆ ಕೊನೆಯ ಮೆಟ್ರೋ ರೈಲು ಹೊರಡಲಿದೆ. 10 ನಿಮಿಷಕ್ಕೊಮ್ಮೆ ಮಾದಾವರ ಟು ನಾಗಸಂದ್ರ ನಡುವೆ ಮೆಟ್ರೋ ರೈಲು ಸಂಚಾರ ಮಾಡಲಿದ್ದು, ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿಯಾದ ನಂತರ ವಿಸ್ತರಿತ ಹಸಿರು ಮಾರ್ಗದ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ಸಂತಸದ ವಿಷಯವನ್ನು ಸಂಸದ ತೇಜಸ್ವಿ ಸೂರ್ಯ ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ಇನ್ನೂ ಹಸಿರು ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರುಕಲ್ಲು, ಮಾದಾವರ ಗಳನ್ನು ಒಳಗೊಂಡ 3 ಮೆಟ್ರೋ ನಿಲ್ದಾಣಗಳು ಬರಲಿದ್ದು, ಒಟ್ಟು 3.14 ಕಿಲೋಮೀಟರ್ ಉದ್ದದ ಮೆಟ್ರೋ ಮಾರ್ಗ ಇದಾಗಿದೆ. ಅಷ್ಟೇ ಅಲ್ಲದೆ ತುಮಕೂರು ರಸ್ತೆಯಲ್ಲಿನ ಸಂಚಾರ ದಟ್ಟಣೆ ನಿಯಂತ್ರಣದಲ್ಲಿ ಈ ಮಾರ್ಗವು ಬಹುಮುಖ್ಯ ಪಾತ್ರ ವಹಿಸಲಿದ್ದು, 91 ತಿಂಗಳ ಅವಧಿ ತೆಗೆದುಕೊಂಡ ನಂತರ ಇದೀಗ ಸಾರ್ವಜನಿಕರ ಸೇವೆಗೆ ಮುಕ್ತವಾಗಿದೆ. ಮುಂದಿನ ವರ್ಷಕ್ಕೆ ಇನ್ನೂ 30 ಕಿ.ಮೀ. ಸೇರ್ಪಡೆಯಾಗಲಿದ್ದು, 2026ಕ್ಕೆ ಬೆಂಗಳೂರು ಮೆಟ್ರೋದ ಒಟ್ಟು ವ್ಯಾಪ್ತಿ 175 ಕಿ.ಮೀ ಆಗಲಿದೆ.