Ashwaveega News 24×7 ಜನವರಿ 25 : ರಾಜ್ಯಪಾಲರು ಮತ್ತು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ನಡುವಿನ ಸಂಬಂಧ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದೆ. ಜನವರಿ 26ರ ಗಣರಾಜ್ಯೋತ್ಸವ ಭಾಷಣಕ್ಕೂ ಸಿದ್ದರಾಮಯ್ಯ ಸರ್ಕಾರವೇ ಸ್ಕ್ರಿಪ್ಟ್ ಸಿದ್ಧಪಡಿಸಲಿದೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಸಖತ್ ಕುತೂಹಲ ಕೆರಳಿಸಿದೆ.
ಸಂವಿಧಾನಾತ್ಮಕ ಸಂಪ್ರದಾಯದಂತೆ, ರಾಜ್ಯಪಾಲರು ಗಣರಾಜ್ಯೋತ್ಸವದಂದು ಸರ್ಕಾರ ಬರೆದುಕೊಟ್ಟ ಭಾಷಣವನ್ನೇ ಓದುವುದು ರೂಢಿ. ಹೀಗಾಗಿ ಈ ಬಾರಿ ಕೂಡ ಗಣದಿನದ ಭಾಷಣವನ್ನು ಸಿದ್ದು ಸರ್ಕಾರವೇ ಸಿದ್ಧಪಡಿಸಲಿದೆ ಎನ್ನಲಾಗಿದೆ.
ಆದರೆ ಪ್ರಶ್ನೆ ಏನೆಂದರೆ, ಸರ್ಕಾರ ಬರೆದುಕೊಡುವ ಭಾಷಣದ ಸ್ವರೂಪ ಹೇಗಿರಲಿದೆ? ಅದರಲ್ಲಿನ ಅಂಶಗಳಿಗೆ ರಾಜಭವನ, ಅಂದರೆ ಲೋಕಭವನದ ಪ್ರತಿಕ್ರಿಯೆ ಏನಿರಬಹುದು ಎಂಬುದು ಇದೀಗ ಚರ್ಚೆಗೆ ಕಾರಣವಾಗಿದೆ. ಸರ್ಕಾರ ಸಿದ್ಧಪಡಿಸಿದ ಭಾಷಣವನ್ನೇ ರಾಜ್ಯಪಾಲರು ಓದುತ್ತಾರಾ? ಅಥವಾ ಭಾಷಣದ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯ ಮೂಡುತ್ತಾ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದೆ ..
ಈ ಎಲ್ಲಾ ಬೆಳವಣಿಗೆಗಳಿಂದಾಗಿ, “ಮತ್ತೆ ರಾಜ್ಯಪಾಲರು–ಸರ್ಕಾರದ ನಡುವೆ ಸಾಂವಿಧಾನಿಕ ಸಂಘರ್ಷ ಆರಂಭವಾಗುತ್ತಾ ?” ಎಂಬ ಅನುಮಾನಗಳು ಮೂಡಿವೆ. ಗಣರಾಜ್ಯೋತ್ಸವದ ವೇದಿಕೆಯಲ್ಲಿ ನಡೆಯಲಿರುವ ಬೆಳವಣಿಗೆಗಳು ರಾಜ್ಯ ರಾಜಕಾರಣಕ್ಕೆ ಯಾವ ತಿರುವು ನೀಡಲಿವೆ ಎಂಬುದನ್ನು ಕಾದು ನೋಡಬೇಕಾಗಿದೆ.
