Ashwaveega News 24×7 ಜನವರಿ 23 – ಬೆಂಗಳೂರು: ಜೆಡಿಎಸ್ ಆಂತರಿಕ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗುವ ಬೆಳವಣಿಗೆಯಲ್ಲಿ, ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ (GTD) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಕಾಣಿಸಿಕೊಂಡಿರುವುದು ಪಕ್ಷದೊಳಗೆ ತಲ್ಲಣ ಮೂಡಿಸಿದೆ. ಹೆಚ್ಡಿ ದೇವೇಗೌಡ ಹಾಗೂ ಹೆಚ್ಡಿ ಕುಮಾರಸ್ವಾಮಿ ಅವರಿಗೆ ಇದು ಬಿಗ್ ಶಾಕ್ ಎಂದು ರಾಜಕೀಯ ವಲಯದಲ್ಲಿ ಮಾತು ಕೇಳಿ ಬರುತ್ತಿದೆ.
ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಿಎಂ ಸಿದ್ದರಾಮಯ್ಯ ಜೊತೆ ದೋಸೆ ಸವಿದ ಜಿ.ಟಿ. ದೇವೇಗೌಡ, ಒಮ್ಮೆ ಸಿಎಂ ಸಿದ್ದು ವಿರುದ್ಧ ತೀವ್ರ ಸಮರ ಸಾರಿದ್ದ ನಾಯಕ ಇದೀಗ ದೋಸ್ತಿ ತೋರಿಸಿದ್ದು ಅಚ್ಚರಿ ಮೂಡಿಸಿದೆ. ಪಕ್ಷದೊಳಗಿನ ಬೆಳವಣಿಗೆಗಳ ಪ್ರಕಾರ, ಜೆಡಿಎಸ್ ಶಾಸಕಾಂಗ ಪಕ್ಷದ (JDLP) ಸ್ಥಾನ ಕೈ ತಪ್ಪಿದ್ದರಿಂದ ಜಿ.ಟಿ. ದೇವೇಗೌಡ ಪಕ್ಷದ ನಾಯಕರಿಂದಲೇ ಅಂತರ ಕಾಯ್ದುಕೊಂಡಿದ್ದಾರೆ . ಈ ಕಾರಣದಿಂದಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಡಿಡಿ ಹಾಗೂ ಹೆಚ್ಡಿಕೆ ಸಮಾರಂಭಗಳಿಂದ GTD ದೂರ ಉಳಿದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಈ ಮಧ್ಯೆ, “ದಳಪತಿ”ಗಳ ರಾಜಕೀಯ ಲೆಕ್ಕಾಚಾರವನ್ನು ಕಟ್ಟಿಹಾಕಲು “ಟಗರು” ಸಿದ್ದರಾಮಯ್ಯ ಜೊತೆ ಪ್ರತ್ಯಕ್ಷರಾದರಾ ? ಎಂಬ ಪ್ರಶ್ನೆಗಳು ಎದ್ದಿವೆ. ಈ ನಡೆ ಜೆಡಿಎಸ್ ಒಳಗಿನ ಅಸಮಾಧಾನವನ್ನು ಬಹಿರಂಗಪಡಿಸಿದಂತಾಗಿದೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ರಾಜಕೀಯ ಮತ್ತೆ ಕುದಿಯುತ್ತಿದ್ದು, ಮಾವಿನಹಳ್ಳಿ ಸಿದ್ದೇಗೌಡ ಅವರನ್ನು ಸೆಳೆಯಲು ಪಕ್ಷದೊಳಗೆ ಕಸರತ್ತು ನಡೆಯುತ್ತಿದೆ. ಜೊತೆಗೆ, ಸಾರಾ ಮಹೇಶ್ ಅವರನ್ನು ಕಣಕ್ಕಿಳಿಸುವ ಕುರಿತು ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ ಎಂಬ ಮಾಹಿತಿ ಕೂಡ ಹೊರಬಿದ್ದಿದೆ.
ಈ ಎಲ್ಲಾ ಬಹಿರಂಗ ಸಮರದ ನಡುವೆಯೇ ಜಿ.ಟಿ. ದೇವೇಗೌಡ ಸಿಎಂ ಸಿದ್ದರಾಮಯ್ಯ ಜೊತೆ ಕಾಣಿಸಿಕೊಂಡಿರುವುದು, ಮುಂದಿನ ರಾಜಕೀಯ ಹೆಜ್ಜೆಗಳ ಬಗ್ಗೆ ಕುತೂಹಲ ಹೆಚ್ಚಿಸಿದೆ.
ಜಿ.ಟಿ. ದೇವೇಗೌಡ ಮುಂದೆ ಕಾಂಗ್ರೆಸ್ ಸೇರ್ಪಡೆ ಫಿಕ್ಸಾ? ಎಂಬ ಪ್ರಶ್ನೆ ಇದೀಗ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದ್ದು, ಮುಂದಿನ ದಿನಗಳಲ್ಲಿ ಅವರ ನಡೆ ಯಾವ ದಿಕ್ಕು ತಾಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
