Ashwaveega News 24×7 ಮಾರ್ಚ್ 18– 2026 : ಕಳೆದ ಕೆಲವು ದಿನಗಳಿಂದ ಸುಡುಬಿಸಿಲಿನಿಂದ ಬಳಲುತ್ತಿದ್ದ ಜನತೆಗೆ ವರುಣದೇವ ತಂಪು ನೀಡಿದ್ದಾನೆ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಗಳ ವಿವಿಧ ಜಿಲ್ಲೆಗಳು ಹಾಗೂ ಮೈಸೂರು ಭಾಗದ ಚಾಮರಾಜನಗರ ಜಿಲ್ಲೆಯಲ್ಲಿ ಗುಡುಗು, ಮಿಂಚು ಸಹಿತ ಭಾರೀ ಆಲಿಕಲ್ಲು ಮಳೆಯಾಗಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಚಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಆಲಿಕಲ್ಲು ಸುರಿದ ಪರಿಣಾಮ, ರಸ್ತೆ ಹಿಮದ ಹೊದಿಕೆಯಂತೆ ಕಾಣಿಸಿಕೊಂಡಿತು. ರಾಶಿಗಟ್ಟಲೆ ಬಿದ್ದ ಆಲಿಕಲ್ಲುಗಳನ್ನು ಕಂಡ ವಾಹನ ಸವಾರರು ಕ್ಷಣಕಾಲ ಆಶ್ಚರ್ಯಚಕಿತರಾಗಿ ಸಂಭ್ರಮಿಸಿದರು. ಆದರೆ, ಕಲಘಟಗಿ–ಮುಂಡಗೋಡು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೂ ಕೆಲ ಮಟ್ಟಿನ ಅಡಚಣೆ ಉಂಟಾಯಿತು.

ಧಾರವಾಡ, ಗದಗ, ಉತ್ತರ ಕನ್ನಡ, ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ವಿಜಯಪುರ ಮತ್ತು ಹಾವೇರಿ ಜಿಲ್ಲೆಗಳಲ್ಲೂ ಧಾರಾಕಾರ ಮಳೆಯಾಗಿದೆ. ಬೆಳಗಾವಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಇದೇ ಪರಿಸ್ಥಿತಿ ಕಂಡುಬಂದಿದೆ. ಕುಂದಗೋಳ ತಾಲೂಕಿನ ಹಲವೆಡೆ ಮನೆಗಳ ಮೇಲ್ಛಾವಣಿ ಹಾಗೂ ಚರಂಡಿಗಳು ಆಲಿಕಲ್ಲಿನಿಂದ ತುಂಬಿಕೊಂಡಿವೆ.
ಒಂದೆಡೆ ಮಳೆಯಿಂದ ಬೇಸಿಗೆಯ ಬಿಸಿಲು ತಗ್ಗಿ ವಾತಾವರಣ ತಂಪಾಗಿದ್ದರೂ, ಇನ್ನೊಂದೆಡೆ ಅಕಾಲಿಕ ಆಲಿಕಲ್ಲು ಮಳೆ ರೈತರಲ್ಲಿ ಆತಂಕ ಮೂಡಿಸಿದೆ. ವಿಶೇಷವಾಗಿ ಮಾವು ಬೆಳೆಗಾರರು ಹಾನಿಯ ಭೀತಿಯಲ್ಲಿದ್ದು, ಹೂಬಿಟ್ಟಿರುವ ಮರಗಳಿಗೆ ಆಲಿಕಲ್ಲು ಬಿದ್ದ ಪರಿಣಾಮ ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ.
ಬೆಳಗಾವಿ ಜಿಲ್ಲೆಯ ಕುಡಚಿ ಭಾಗದಲ್ಲಿ ಮಳೆಯ ಅಬ್ಬರಕ್ಕೆ ದೇವರ ಕಿಚ್ಚು ಸಹ ನಂದಿಹೋಗಿರುವುದು ವರದಿಯಾಗಿದೆ . ಒಟ್ಟಾರೆ, ಈ ಅಕಾಲಿಕ ಮಳೆ ಜನರಿಗೆ ತಂಪು ನೀಡಿದರೂ, ಕೃಷಿ ಕ್ಷೇತ್ರಕ್ಕೆ ಸವಾಲಾಗಿ ಪರಿಣಮಿಸಿದೆ.
