Ashwaveega News 24×7 ಮಾರ್ಚ್ 09 – 2026 :ಹಾವೇರಿ : ಸಾರ್ವಜನಿಕರಿಗೆ ಚಿಕಿತ್ಸೆ ನೀಡಬೇಕಾದ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗಿದ್ದು, ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಇರುವ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಒಂದು ವರ್ಷದಿಂದ ಕೆಟ್ಟು ನಿಂತಿರುವುದು ಬೆಳಕಿಗೆ ಬಂದಿದೆ .
ಇಂದು ನಿನ್ನೆಂದಲ್ಲ, ಸುಮಾರು ಒಂದು ವರ್ಷದಿಂದಲೇ ಈ ಶುದ್ಧ ನೀರಿನ ಘಟಕ ಕಾರ್ಯನಿರ್ವಹಿಸುತ್ತಿಲ್ಲ ಎಂದು ರೋಗಿಗಳು ಹಾಗೂ ಸಾರ್ವಜನಿಕರು ಆರೋಪಿಸುತ್ತಿದ್ದಾರೆ . ದುಃಖದ ಸಂಗತಿ ಏನೆಂದರೆ , ಕುಡಿಯುವ ನೀರು ನೀಡಬೇಕಾದ ಈ ಘಟಕವನ್ನು ಇದೀಗ ಹಾಳಾದ ವಸ್ತುಗಳನ್ನು ಇಡುವ ಸ್ಥಳವಾಗಿ ಬಳಸಲಾಗುತ್ತಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ .
ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ರೋಗಿಗಳು ಮತ್ತು ಅವರ ಬಂಧುಗಳು ಶುದ್ಧ ಕುಡಿಯುವ ನೀರಿಗಾಗಿ ದಿನವೂ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಹಲವು ಬಾರಿ ಆಸ್ಪತ್ರೆ ಆಡಳಿತಕ್ಕೆ ಮನವಿ ಸಲ್ಲಿಸಿದರೂ ಸಮಸ್ಯೆಗೆ ಪರಿಹಾರ ಸಿಗಲಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ಪರಿಸ್ಥಿತಿ ಉಂಟಾಗಿದೆ ಎಂಬ ಆರೋಪ ಕೂಡ ಕೇಳಿಬರುತ್ತಿದೆ. ಆಸ್ಪತ್ರೆಯಲ್ಲಿ ಶುದ್ಧ ನೀರಿನ ಘಟಕ ಇರೋದು ರೋಗಿಗಳಿಗೆ ನೀರು ಒದಗಿಸಲುನಾ, ಅಥವಾ ಬೇರೆ ವಸ್ತುಗಳನ್ನು ಇಡಲುನಾ ಎಂಬ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಗಮನಹರಿಸಿ, ಕೆಟ್ಟು ನಿಂತಿರುವ ಶುದ್ಧ ನೀರಿನ ಘಟಕವನ್ನು ದುರಸ್ತಿ ಮಾಡಿ ರೋಗಿಗಳಿಗೆ ಆದಷ್ಟು ಬೇಗ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
