Ashwaveega News 24×7- ಜನವರಿ 06 – ಬೆಳಗಾವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರ ಕಾರು ಚಾಲಕನ ಮೇಲೆ ಬೆಳಗಾವಿಯಲ್ಲಿ ಭೀಕರ ಚಾಕು ದಾಳಿ ನಡೆದಿದ್ದು, ನಗರದಲ್ಲಿ ಆತಂಕ ಮೂಡಿದೆ.

ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಬಸವಂತ ಕಡೋಲ್ಕರ್ (32) ಮೇಲೆ ಮಧ್ಯಾಹ್ನ ನಗರದ ಕ್ಲಬ್ ರಸ್ತೆಯಲ್ಲಿ ಈ ದಾಳಿ ನಡೆದಿದೆ. ಕಾರು ನಿಲ್ಲಿಸಿ ಕೆಳಗೆ ನಿಂತಿದ್ದ ವೇಳೆ, ಬೈಕ್ನಲ್ಲಿ ಬಂದ ಇಬ್ಬರು ಕಿಡಿಗೇಡಿಗಳು ಏಕಾಏಕಿ ದಾಳಿ ನಡೆಸಿದ್ದಾರೆ.
ಕಿಡಿಗೇಡಿಗಳು ಬಸವಂತ ಅವರ ಎದೆ, ಭುಜ ಹಾಗೂ ತೊಡೆ ಸೇರಿ ನಾಲ್ಕು ಕಡೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಸವಂತ ಕಡೋಲ್ಕರ್ ಅವರನ್ನು ತಕ್ಷಣವೇ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಬಗ್ಗೆ ಮಾಹಿತಿ ಪಡೆದ ಡಿಸಿಪಿ, ಎಸಿಪಿ ಹಾಗೂ ಮೃಣಾಲ್ ಹೆಬ್ಬಾಳ್ಕರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಈ ಘಟನೆ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಸವಂತ ಕಡೋಲ್ಕರ್ ಹಲವು ವರ್ಷಗಳಿಂದ ಮೃಣಾಲ್ ಹೆಬ್ಬಾಳ್ಕರ್ ಅವರ ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ದಾಳಿ ನಡೆಸಿದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
