Ashwaveega News 24×7 ಏಪ್ರಿಲ್ 4– 2026 : ಹುಬ್ಬಳ್ಳಿನಲ್ಲಿ ನಡೆದಿದ್ದ ಲವ್ ಜಿಹಾದ್ ಆರೋಪ ಪ್ರಕರಣಕ್ಕೆ ದಿನಕ್ಕೊಂದು ಹೊಸ ತಿರುವು ಸಿಗುತ್ತಿದೆ. ಯುವತಿಯ ವಿಡಿಯೋ ಬಿಡುಗಡೆ ಬೆನ್ನಲ್ಲೇ ಇದೀಗ ಸಮೀರ್ ಎಂಬಾತ ತನ್ನ ಸ್ಪಷ್ಟನೆ ನೀಡಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಪ್ರಕರಣ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ಸಂತ್ರಸ್ತೆಯ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಸಮೀರ್, “ನನ್ನ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಸುಳ್ಳು” ಎಂದು ಹೇಳಿದ್ದಾನೆ. ಇದೇ ವೇಳೆ ವೈರಲ್ ಆಗಿರುವ ವಿಡಿಯೋ ಕುರಿತು ಮಾತನಾಡಿದ ಆತ, “ವಿಡಿಯೋ ರೆಕಾರ್ಡ್ ಆಗಿರುವುದು ನಿಜ. ಆದರೆ ಅದನ್ನು ನಾನು ರೆಕಾರ್ಡ್ ಮಾಡಿಲ್ಲ. ಅದು ಹುಡುಗಿಯ ಮೊಬೈಲ್ನಲ್ಲೇ ಇತ್ತು” ಎಂದು ಸ್ಪಷ್ಟನೆ ನೀಡಿದ್ದಾನೆ .
ಇನ್ನೂ ಮುಂದೆ ಮಾತನಾಡಿದ ಸಮೀರ್, “ಪ್ರಜ್ಞೆ ತಪ್ಪಿಸುವ ಔಷಧ ನೀಡಿದ್ದರೆ ಹುಡುಗಿ ಪ್ರಜ್ಞೆ ಕಳೆದುಕೊಳ್ಳಬೇಕಿತ್ತು. ಆದರೆ ಆ ವಿಡಿಯೋದಲ್ಲಿ ಪ್ರಜ್ಞೆ ಕಳೆದುಕೊಂಡಿರುವುದು ನಾನು, ಹುಡುಗಿ ಅಲ್ಲ” ಎಂದು ಹೇಳಿದ್ದಾನೆ. ಈ ಮೂಲಕ ವಿಡಿಯೋವನ್ನು ಹುಡುಗಿಯೇ ರೆಕಾರ್ಡ್ ಮಾಡಿದ್ದಾಳೆ ಎಂಬ ಗಂಭೀರ ಆರೋಪವನ್ನು ಸಹ ಮುಂದಿಟ್ಟಿದ್ದಾನೆ.
ಈ ಪ್ರಕರಣದಲ್ಲಿ ಸತ್ಯಾಸತ್ಯತೆ ಹೊರತರುವ ಸಲುವಾಗಿ, ವೈರಲ್ ವಿಡಿಯೋವನ್ನು ಯಾರು ರೆಕಾರ್ಡ್ ಮಾಡಿದ್ದಾರೆ ಎಂಬುದನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಜೊತೆಗೆ ತನ್ನ ಮೊಬೈಲ್ ಹಾಗೂ ಯುವತಿಯ ಮೊಬೈಲ್ಗಳನ್ನು ತಪಾಸಣೆ ಮಾಡುವಂತೆ ತನಿಖಾಧಿಕಾರಿಗಳಿಗೆ ಆಗ್ರಹಿಸಿದ್ದಾನೆ .
