Ashwaveega News 24×7 ಫೆಬ್ರವರಿ 07 -2026 – ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಸ್ಥಾನ ಕುರಿತ ತಮ್ಮ ಆಸೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. “ನಾನು ಮುಖ್ಯಮಂತ್ರಿ ಆಗಬೇಕು ಎಂಬ ಕನಸು ನನಗೂ ಇದೆ. ಆ ಕನಸು ಜನರಿಗೂ ಇದೆ, ಶಾಸಕರಿಗೂ ಇದೆ, ಮಾಧ್ಯಮಗಳಿಗೂ ಇದೆ”ಎಂದು ಡಿಕೆಶಿ ಹೇಳಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಆದರೆ, ಇದೇ ವೇಳೆ ಪಕ್ಷದ ಶಿಸ್ತುಗೂ ಬದ್ಧತೆ ತೋರಿದ ಡಿಕೆ, “ಆದರೆ ಪಕ್ಷ ಏನು ಹೇಳುತ್ತೋ ಅದನ್ನೇ ನಾನು ಕೇಳಬೇಕು ಅಲ್ವಾ?” ಎಂದು ಸ್ಪಷ್ಟಪಡಿಸಿದ್ದಾರೆ. ಬಜೆಟ್ ನಂತರ ಅಧಿಕಾರ ಹಂಚಿಕೆ ಆಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಇದಕ್ಕೆ ಸಮಯವೇ ಉತ್ತರ ಕೊಡಲಿದೆ”ಎಂದು ಹೇಳುವ ಮೂಲಕ ಕುತೂಹಲ ಉಳಿಸಿಕೊಂಡಿದ್ದಾರೆ.
ಪರಂ ಸಿಎಂ ಎಂಬ ಕೂಗು, ಅಭಿಮಾನಿಗಳ ಒತ್ತಡದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ಅವರವರ ಅಭಿಮಾನಿಗಳು ಆಸೆ ಪಡ್ತಾರೆ, ಅದನ್ನು ನಾನು ಬೇಡ ಅನ್ನಲ್ಲ”ಎಂದು ರಾಜಕೀಯ ಚಾಣಾಕ್ಷತೆ ಪ್ರದರ್ಶಿಸಿದ್ದಾರೆ.
ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಇರುವ ಆಡಳಿತದ ಅನುಭವ ಮತ್ತು ರಾಜಕೀಯ ಪಕ್ವತೆ, ಸಿಎಂ ಸ್ಥಾನದಲ್ಲಿ ಅವರ ದೊಡ್ಡ ಅಸ್ತ್ರವಾಗಿದೆ. ಡಿಕೆ ಶಿವಕುಮಾರ್ ಎಷ್ಟೇ ಡೈನಾಮಿಕ್ ನಾಯಕನಾಗಿದ್ದರೂ, ಮುಖ್ಯಮಂತ್ರಿ ಕುರ್ಚಿ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಆಟವೇ ಮೇಲು ಎನ್ನುವ ಮಾತು ಕೇಳಿಬರುತ್ತಿವೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ಅಧಿಕಾರ ಹಸ್ತಾಂತರ ಮಾಡಬೇಕು ಎಂದು ಸಿದ್ದರಾಮಯ್ಯ ಅವರಿಗೆ ಹೇಳುವಂತಹ ವರಿಷ್ಠ ನಾಯಕರು ಇಲ್ಲ ಎನ್ನುವುದು ಕೂಡ ಸಿದ್ದರಾಮಯ್ಯ ಅವರ ಬಲವಾಗಿದೆ. ದೇಶದ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಸ್ವಲ್ಪ ದುರ್ಬಲ ಸ್ಥಿತಿಯಲ್ಲಿರುವುದೇ ಸಿದ್ದರಾಮಯ್ಯ ಅವರ ರಾಜಕೀಯ ಬಂಡವಾಳವಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.
ಹೀಗಾಗಿ, “ಸಮಯವೇ ಎಲ್ಲಕ್ಕೂ ಉತ್ತರ ಕೊಡಲಿದೆ”ಎಂದು ಹೇಳಿರುವ ಡಿಕೆ ಶಿವಕುಮಾರ್, ಸಾಕಷ್ಟು ಕಸರತ್ತು ಮಾಡಿದರೂ ಸಿಎಂ ಪಟ್ಟ ಸಿಗದಿದ್ದರೂ ಪಟ್ಟುಬಿಡದೆ ಕಾಯುವ ರಾಜಕಾರಣಿಯಂತೆ ಕಾಣಿಸುತ್ತಿದ್ದಾರೆ.
