Ashwaveega News 24×7 ಮಾರ್ಚ್ 12 – 2026 : ಬೆಂಗಳೂರು : ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉದ್ಭವಿಸಿರುವ ಸಂಕಷ್ಟದ ನಡುವೆಯೇ ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (IEA) ಮಹತ್ವದ ನಿರ್ಧಾರ ಕೈಗೊಂಡಿದೆ. ತುರ್ತು ಸಂದರ್ಭಗಳಲ್ಲಿ ಬಳಕೆಗಾಗಿ ಸಂಗ್ರಹಿಸಿ ಇಟ್ಟಿರುವ ಕಚ್ಚಾ ತೈಲದ ದಾಸ್ತಾನಿನಿಂದ ಸುಮಾರು 400 ಮಿಲಿಯನ್ ಬ್ಯಾರೆಲ್ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಂಸ್ಥೆ ಗ್ರೀನ್ ಸಿಗ್ನಲ್ ನೀಡಿದೆ.
ತೈಲ ಕೊರತೆ ಎದುರಿಸುತ್ತಿರುವ ರಾಷ್ಟ್ರಗಳಿಗೆ ನೆರವಾಗುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಾರುಕಟ್ಟೆಯಲ್ಲಿ ತೈಲ ಸರಬರಾಜು ಹೆಚ್ಚಿಸಿ ಬೆಲೆ ಸ್ಥಿರತೆ ತರಲು ಈ ಕ್ರಮ ಸಹಕಾರಿಯಾಗಲಿದೆ ಎಂದು ಐಇಎ ತಿಳಿಸಿದೆ.
ಆದರೆ ಈ ತೈಲವನ್ನು ಐಇಎ ಸದಸ್ಯ ರಾಷ್ಟ್ರಗಳಿಗೆ ಮಾತ್ರ ಪೂರೈಕೆ ಮಾಡಲಾಗುತ್ತದೆ. ಭಾರತ ಐಇಎ ಒಕ್ಕೂಟದ ಸದಸ್ಯ ರಾಷ್ಟ್ರವಲ್ಲದ ಕಾರಣ ಈ ತೈಲ ಸರಬರಾಜಿನ ಪ್ರಯೋಜನ ಭಾರತಕ್ಕೆ ದೊರೆಯುವುದಿಲ್ಲ ಎಂದು ತಿಳಿದುಬಂದಿದೆ.
ಇಷ್ಟು ದೊಡ್ಡ ಪ್ರಮಾಣದಲ್ಲಿ ತೈಲ ಬಿಡುಗಡೆ ಮಾಡಲು ಐಇಎ ನಿರ್ಧಾರ ಕೈಗೊಂಡಿರುವುದು ಇದೇ ಮೊದಲ ಬಾರಿಗೆ ಎನ್ನಲಾಗಿದೆ. ಪ್ರಸ್ತುತ ಐಇಎ ಬಳಿ ಸುಮಾರು 1.2 ಶತಕೋಟಿ ಬ್ಯಾರೆಲ್ಗಿಂತ ಹೆಚ್ಚು ಕಚ್ಚಾ ತೈಲದ ದಾಸ್ತಾನು ಇರುವುದಾಗಿ ವರದಿಯಾಗಿದೆ.
