Ashwaveega News 24×7 ಫೆಬ್ರವರಿ 10 -2026 – ನವದೆಹಲಿ: ಬಹಿಷ್ಕಾರದ ಮಾತಿಗೆ ಅಂತಿಮವಾಗಿ ಯೂಟರ್ನ್ ಹೊಡೆದಿರುವ ಪಾಕಿಸ್ತಾನ, ಭಾರತದ ವಿರುದ್ಧದ ಪಂದ್ಯಕ್ಕೆ ಒಪ್ಪಿಗೆ ಸೂಚಿಸಿದೆ. ಐಸಿಸಿ ಟಿ-20 ವಿಶ್ವಕಪ್ನಲ್ಲಿ ಭಾರತ–ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಇದೀಗ ಅಧಿಕೃತವಾಗಿ ಕನ್ಫರ್ಮ್ ಆಗಿದೆ.
ಫೆಬ್ರವರಿ 15ರಂದು ಶ್ರೀಲಂಕಾದಲ್ಲಿ ನಡೆಯಲಿರುವ ಈ ಮಹತ್ವದ ಪಂದ್ಯಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಗ್ರೀನ್ ಸಿಗ್ನಲ್ ನೀಡಿದೆ. ಇದಕ್ಕೂ ಮೊದಲು, ಟಿ-20 ವಿಶ್ವಕಪ್ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಹೇಳಿಕೆ ನೀಡಿತ್ತು.
ಟಿ- 20 ವಿಶ್ವಕಪ್ನಿಂದ ಬಾಂಗ್ಲಾದೇಶ ಹಿಂದೆ ಸರಿದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪಾಕಿಸ್ತಾನ, ಅದನ್ನೇ ನೆಪ ಮಾಡಿಕೊಂಡು ಭಾರತದ ವಿರುದ್ಧದ ಪಂದ್ಯಕ್ಕೂ ಬಾಯ್ಕಾಟ್ ಬೆದರಿಕೆ ಹಾಕಿತ್ತು. ಈ ನಿರ್ಧಾರ ಅಂತರರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
ಆದರೆ ಐಸಿಸಿ ಕಠಿಣ ವಾರ್ನಿಂಗ್ ನೀಡಿದ ಬೆನ್ನಲ್ಲೇ ಪಾಕಿಸ್ತಾನ ತನ್ನ ನಿರ್ಧಾರವನ್ನು ಮರುಪರಿಶೀಲಿಸಿದೆ. ಪಂದ್ಯ ಬಹಿಷ್ಕಾರದಿಂದ ಉಂಟಾಗುವ ಆರ್ಥಿಕ ನಷ್ಟ, ದಂಡ ಹಾಗೂ ಮುಂದಿನ ಐಸಿಸಿ ಟೂರ್ನಿಗಳ ಮೇಲೆ ಬೀರುವ ಪರಿಣಾಮಗಳ ಎಚ್ಚರಿಕೆ, ಪಾಕಿಸ್ತಾನವನ್ನು ಹಿಂದೆ ಸರಿಯುವಂತೆ ಮಾಡಿದೆ .
ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನ ಕ್ರಿಕೆಟ್ಗೆ, ಪಂದ್ಯ ಬಹಿಷ್ಕಾರವು ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ ಎಂಬ ಅರಿವಿನಿಂದಲೇ, ಬಾಯ್ಕಾಟ್ ನಿರ್ಧಾರಕ್ಕೆ ಕಟ್ ಹಾಕಲಾಗಿದೆ . ಇದೀಗ ಎಲ್ಲ ಅಡೆತಡೆಗಳ ನಡುವೆಯೂ, ಭಾರತ ಮತ್ತು ಪಾಕಿಸ್ತಾನ ನಡುವಿನ ಟಿ-20 ವಿಶ್ವಕಪ್ ಸಮರ ಫಿಕ್ಸ್ ಆಗಿದ್ದು,ಕ್ರಿಕೆಟ್ ಅಭಿಮಾನಿಗಳ ಕುತೂಹಲ ಗಗನಕ್ಕೇರಿದೆ.
