Ashwaveega News 24×7 ಫೆಬ್ರವರಿ 03 -2026 : ಭಾರತ ಮತ್ತು ಅಮೆರಿಕ ನಡುವೆ ಮುಂದುವರಿದಿದ್ದ ವ್ಯಾಪಾರ ಸಂಘರ್ಷಕ್ಕೆ ಕೊನೆಗೂ ಬ್ರೇಕ್ ಬಿದ್ದಂತೆ ಕಾಣಿಸುತ್ತಿದೆ. ಎರಡು ರಾಷ್ಟ್ರಗಳ ನಡುವೆ ಹೊಸ ವ್ಯಾಪಾರ ಒಪ್ಪಂದ ಘೋಷಣೆಯಾಗಿದ್ದು, ಇದನ್ನು “ಮದರ್ ಡೀಲ್” ಎಂದು ವರ್ಣಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಒಪ್ಪಂದದ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಡೀಲ್ ಪರಿಣಾಮವಾಗಿ, ಭಾರತದ ಮೇಲಿದ್ದ ಅಮೆರಿಕದ ಸುಂಕವನ್ನು ಶೇ. 50ರಿಂದ ಶೇ. 18ಕ್ಕೆ ಇಳಿಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಈ ಮೂಲಕ ಭಾರತ–ಅಮೆರಿಕದ ನಡುವಿನ ಟ್ರೇಡ್ ವಾರ್ ಶಮನವಾಗಿದ್ದು, “ದೊಡ್ಡಣ್ಣ” ಎಂದೇ ಕರೆಸಿಕೊಳ್ಳುವ ಅಮೆರಿಕದ ಧೋರಣೆಯಲ್ಲಿ ಬದಲಾವಣೆ ಕಂಡುಬಂದಿದೆ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಭಾರತ ಈಗಾಗಲೇ ಹಲವು ದೇಶಗಳ ಜತೆ ವ್ಯಾಪಾರ ಒಪ್ಪಂದಗಳಿಗೆ ಮುಂದಾಗಿದ್ದು, ಇದೇ ಹಿನ್ನೆಲೆಯಲ್ಲೇ ಅಮೆರಿಕವೂ ಭಾರತದೊಂದಿಗೆ ಮಾತುಕತೆಗೆ ಮುಂದಾಗಿದೆ . “ಮದರ್ ಡೀಲ್” ಅಂತಿಮ ಹಂತ ತಲುಪುತ್ತಿದ್ದಂತೆ ಅಮೆರಿಕ ದಾರಿಗೆ ಬಂದಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ .
ಈ ಒಪ್ಪಂದದ ಭಾಗವಾಗಿ, ಇಂಧನ, ತಂತ್ರಜ್ಞಾನ, ಕೃಷಿ ಹಾಗೂ ಕಲ್ಲಿದ್ದಲು ಕ್ಷೇತ್ರಗಳಲ್ಲಿ ಭಾರತ–ಅಮೆರಿಕ ವ್ಯಾಪಾರ ವಿಸ್ತಾರವಾಗಲಿದೆ ಎಂದು ಹೇಳಲಾಗಿದೆ. ಇದಲ್ಲದೆ, ವೆನೆಜುವೆಲಾದಿಂದ ತೈಲ ಖರೀದಿಸಲು ಸಹ ಒಪ್ಪಂದವಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ .
“ಭಾರತದ ಜೊತೆ ಅಮೆರಿಕ ವ್ಯಾಪಾರ ನಡೆಸಲಿದೆ” ಎಂದು ಟ್ರಂಪ್ ಹೇಳಿರುವುದಾಗಿ ವರದಿಯಾಗಿದೆ. ಈ ಬೆಳವಣಿಗೆಗಳು ಜಾಗತಿಕ ವ್ಯಾಪಾರ ರಾಜಕೀಯದಲ್ಲಿ ಹೊಸ ಸಮೀಕರಣಗಳಿಗೆ ದಾರಿ ಮಾಡಿಕೊಡಬಹುದೆಂದು ಅಭಿಪ್ರಾಯಪಟ್ಟಿದ್ದಾರೆ .
ಒಟ್ಟಿನಲ್ಲಿ, ಭಾರತ–ಅಮೆರಿಕ ನಡುವಿನ ಈ ಹೊಸ ವ್ಯಾಪಾರ ಒಪ್ಪಂದ, ಮುಂದಿನ ದಿನಗಳಲ್ಲಿ ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧಗಳಿಗೆ ಹೊಸ ತಿರುವು ನೀಡುವ ಸಾಧ್ಯತೆ ಇದೆ .
