ಆ ನೆಲದಲ್ಲಿ ಗೆಲುವು ಎಂಬುದು ಮರಿಚೀಕೆಯಾಗಿತ್ತು. ಗೆಲುವಿನ ವಾಸನೆ ಕಂಡು ದಶಕಗಳೇ ಉರುಳಿತ್ತು. 2008ರಲ್ಲಿ ಕೊನೆ ಬಾರಿಗೆ ಆ ನೆಲದಲ್ಲಿ ಜಯದ ನಗು ಬೀರಿದ್ದು ಬಿಟ್ಟರೆ, 17 ವರ್ಷಗಳ ಕಾಲ ಸೋಲಿನ ಹತಾಶೆಯಲ್ಲಿ ಹಿಂತಿರುಗಬೇಕಾಗಿತ್ತು. ಜಯ ಎಂಬುದು ಕಬ್ಬಿಣದ ಕಡಲೆಯಾಗಿತ್ತು. ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು ಎಂಬ ಮಾತು ಆರ್ಸಿಬಿ ಪಾಲಿಗೆ ಅನ್ವಯವಾಗಿದೆ. ಕೊನೆಗೂ ಸಿಂಹಗಳ ಕೋಟೆಯಲ್ಲಿ ಘರ್ಜಿಸಿ, ವಿಜೃಂಭಿಸಿ 17 ವರ್ಷದ ಬಳಿಕ ಗೆಲುವಿನ ರುಚಿಯನ್ನ ಕಂಡಿದೆ. ಇದು ಐಪಿಎಲ್ 2025ರ 8ನೇ ಪಂದ್ಯ ಟಾಸ್ ಗೆದ್ದ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಬ್ಯಾಟಿಂಗ್ಗಿಳಿದ ಫಿಲ್ ಸಾಲ್ಟ್, ಕೊಹ್ಲಿ ಮೊದಲ ವಿಕೆಟ್ಗೆ 45 ರನ್ಗಳ ಜೊತೆಯಾಟ ಆಡಿದರು. ಎಂ ಎಸ್ ಧೋನಿ ಅವರ ಅದ್ಬುತ ಸ್ಟಪಿಂಗ್ಗೆ ಫಿಲ್ ಸಾಲ್ಟ್ ಔಟಾದರು. ನಂತರ ಬಂದ ಕನ್ನಡಿಗ ಪಡಿಕ್ಕಲ್ (27) ಬಿರುಸಿನ ಆಟವಾಡಿ ತಂಡದ ರನ್ ವೇಗ ಹೆಚ್ಚಾಗುವಂತೆ ನೋಡಿಕೊಂಡರು. ಎರಡು ವಿಕೆಟ್ ಕಳೆದುಕೊಂಡರೂ ವಿರಾಟ್ ಕೊಹ್ಲಿ ತಾಳ್ಮೆಯಿಂದಲೇ ಬ್ಯಾಟಿಂಗ್ ನಡೆಸುತ್ತಿದ್ದರು. ಪಡಿಕ್ಕಲ್ ಔಟ್ ಆಗುತ್ತಿದ್ದಂತೆ ಕೊಹ್ಲಿ ಜೊತೆ ಸೇರಿದ ನಾಯಕ ರಜತ್ (51) ಅರ್ಧಶತಕ ಗಳಿಸಿದರು. ಅದಕ್ಕೂ ಮುನ್ನ ಅವರಿಗೆ ಹಲವು ಬಾರಿ ಸಿಎಸ್ಕೆ ಆಟಗಾರರು ಕ್ಯಾಚ್ ಚೆಲ್ಲಿ ಜೀವದಾನ ಕೊಟ್ಟಿದ್ದರು. ಅದನ್ನು ಸಮರ್ಥವಾಗಿ ಬಳಸಿಕೊಂಡ ರಜತ್ ಐಪಿಎಲ್ನಲ್ಲಿ 8ನೇ ಅರ್ಧಶತಕ ಸಿಡಿಸಿದರು. ಒಂದು ಕಡೆ ಆಕ್ರಮಣಕಾರಿ ಆಟವಾಡುತ್ತಿದ್ದ ರಜತ್ನ್ನ ನೋಡಿ ಗೆಯರ್ ಬದಲಾಯಿಸಿದ ಕೊಹ್ಲಿ ಸಿಕ್ಸ್ ಪೋರ್ ಸೇರಿದಂತೆ 32 ರನ್ಗಳನ್ನು ಗಳಿಸಿ ಔಟ್ ಆದರು. ನಂತರ ಹಾಗ ಆರ್ಸಿಬಿ ರನ್ ಗಳಿಕೆಯಲ್ಲಿ ಉತ್ತುಮ ಸ್ಥಿತಿಯಲ್ಲಿತ್ತು. ಲಿಯಾಮ್ ಲಿವಿಂಗ್ಸ್ಟೋನ್(10), ಜಿತೇಶ್ ಶರ್ಮಾ(12) ಟೀಮ್ ಡೇವಿಡ್ (22) ಬ್ಯಾಟಿಂಗ್ನಿಂದ ಆರ್ಸಿಬಿ 196 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು. ಸಿಎಸ್ಕೆ ಪರ ನೂರ್ ಅಹ್ಮದ್ 3, ಆರ್ ಅಶ್ವಿನ್ 1, ಖಲೀಲ್ ಅಹ್ಮದ್ 1, ಪತಿರಾಣ 2 ವಿಕೆಟ್ ಪಡೆದುಕೊಂಡರು.

ಭುವಿ, ಹ್ಯಾಜಲ್ವುಡ್ ಖದರ್, ಸಿಎಸ್ಕೆ ಬ್ಯಾಟಿಂಗ್ ಢಮಾರ್
197 ರನ್ಗಳ ಗುರಿ ಬೆನ್ನತ್ತಿದ್ದ ಸಿಎಸ್ಕೆ ತಂಡಕ್ಕೆ ಆರಂಭದಲ್ಲಿಯೇ ರಾಹುಲ್ ತ್ರಿಪಾಠಿ (5), ಅವರನ್ನು ಕಳೆದುಕೊಂಡಿತ್ತು. ನಾಯಕ ರುತುರಾಜ್ ಗಾಯಕ್ವಾಡ್ (0) ಚೆನ್ನೈನಲ್ಲಿ ಮೊದಲ ಬಾರಿಗೆ ಡಕ್ ಔಟ್ ಆದರು. ಪವರ್ ಪ್ಲೇನಲ್ಲಿ ಸಿಎಸ್ಕೆ 30 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ನಂತರ ಬಂದ ದೀಪಕ್ ಹೂಡಾ(4), ಸ್ಯಾಮ್ ಕರನ್(8), ಶಿವಂ ದುಬೆ (19) ಯಾರು ಕೂಡ ಆರ್ಸಿಬಿ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿ ಕ್ರೀಸಿನಲ್ಲಿ ನಿಲುವ ಕೆಲಸ ಮಾಡಿಲ್ಲ. ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ರಚಿನ್ ರವೀಂದ್ರ ಮಾತ್ರ ಏಕಾಂಗಿಯಾಗಿ ಹೋರಾಟ ಮಾಡಿದರು ಅವರ ಆಟ ತಂಡವನ್ನು ಗೆಲುವಿನ ಕಡೆ ಕರೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಆಗ್ರ ಕ್ರಮಾಂಕದ 6 ಬ್ಯಾಟರ್ಗಳನ್ನು ಕಳೆದುಕೊಂಡ ಸಿಎಸ್ಕೆಗೆ ೀ ಪಂದ್ಯದಲ್ಲಿ ಗೆಲುವು ಅಸಾಧ್ಯ ಎಂಂಬ ನಿರ್ಧಾರಕ್ಕೆ ಬಂದಿತ್ತು. ಅದರಂತೆ ಎಂಎಸ್ ಧೋನಿಗಿಂತ ಆರ್ ಅಶ್ವಿನ್ ಅವರನ್ನು ಮುಂಚಿತವಾಗಿ ಬ್ಯಾಟಿಂಗ್ಗೆ ಕಳುಹಿಸಿಕೊಡಲಾಯಿತ್ತು. ಆದರೆ ಆ ಒಂದು ಪ್ರಯೋಗ ಚೆನ್ನೈಗೆ ಕೈ ಹಿಡಿಯಲಿಲ್ಲ. ಪಂದ್ಯವೇನೋ ಸೋಲುತ್ತೇವೆ ಕನಿಷ್ಠ ಧೋನಿ ಬ್ಯಾಟಿಂಗ್ ಆದರೂ ನೋಡೋಣ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಧೋನಿ ನಿರಾಸೆ ಮಾಡಿಲ್ಲ. ಎಂದಿನಂತೆ ಧೋನಿ ಬ್ಯಾಟಿಂಗ್ಗಿಳಿಯುತ್ತಿದ್ದಂತೆ ಅಭಿಮಾನಿಗಳು ಧೋನಿ ಧೋನಿ ಎಂದು ಕೂಗುತ್ತಿದ್ದರು. 16 ಎಸೆತಗಳನ್ನು ಎದುರಿಸಿದ ಎಂಎಸ್ ಧೋನಿ 3 ಫೋರ್, 2 ಸಿಕ್ಸರ್ ಒಳಗೊಂಡತೆ (30) ರನ್ ಬಾರಿಸಿದರು. ಇನ್ನಿಂಗ್ಸ್ನ ಕೊನೆ ಓವರ್ ಎಸೆದ ಕೃನಾಲ್ ಪಾಂಡ್ಯ ಬೌಲಿಂಗ್ನಲ್ಲಿ ಧೋನಿ 2 ಸತತ 2 ಸಿಕ್ಸರ್ ಹಾಗೂ 1 ಫೋರ್ ಬಾರಿಸಿ ನಾನೇಕೆ ಇನ್ನು ಐಪಿಎಲ್ ಆಡುತ್ತಿದ್ದೇನೆ ಎಂದು ತೋರಿಸಿಕೊಟ್ಟರು. ಅಂತಿಮವಾಗಿ ಸಿಎಸ್ಕೆ ತಂಡ 20 ಓವರ್ಗಳಲ್ಲಿ 146 ರನ್ ಗಳಿಸಲಷ್ಟೇ ಶಕ್ತವಾಯಿತ್ತು. ಆರ್ಸಿಬಿ 50 ರನ್ಗಳ ಭರ್ಜರಿ ಜಯ ದಾಖಲಿಸಿತ್ತು.
ಅಭಿಷೇಕ್ ಎಸ್