Ashwaveega News 24×7 ಮಾರ್ಚ್ 20 – 2026 : ದೋಹಾ : ವಿಶ್ವದ ಪ್ರಮುಖ ನೈಸರ್ಗಿಕ ಅನಿಲ ರಫ್ತುದಾರ ರಾಷ್ಟ್ರಗಳಲ್ಲಿ ಒಂದಾದ ಕತಾರ್ ನಲ್ಲಿ ಗಂಭೀರ ಬೆಳವಣಿಗೆ ಕಂಡುಬಂದಿದೆ. ಪ್ರಮುಖ ಅನಿಲ ಘಟಕದ ಮೇಲೆ ಇರಾನ್ ನಡೆಸಿದ ದಾಳಿಯ ಪರಿಣಾಮ, ಜಾಗತಿಕ ಅನಿಲ ಪೂರೈಕೆಯಲ್ಲಿ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗುವ ಆತಂಕ ಎದುರಾಗಿದೆ.
ಈ ಘಟನೆಯಿಂದ ಮುಂದಿನ ಐದು ವರ್ಷಗಳವರೆಗೆ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಅನಿಲ ಪೂರೈಕೆಯಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ವರದಿಗಳು ಸೂಚಿಸುತ್ತಿವೆ. ಇದರ ಪರಿಣಾಮವಾಗಿ ಭಾರತಕ್ಕೂ ಪೂರೈಕೆ ವ್ಯತ್ಯಯವಾಗುವ ಭೀತಿ ವ್ಯಕ್ತವಾಗಿದೆ.
ಜಾಗತಿಕ ಮಟ್ಟದಲ್ಲಿ ಶೇಕಡಾ 17ರಷ್ಟು ನೈಸರ್ಗಿಕ ಅನಿಲ ಪೂರೈಕೆ ಕತಾರ್ನ ಈ ಘಟಕದಿಂದಲೇ ನಡೆಯುತ್ತಿತ್ತು. ಇದೀಗ ಈ ಘಟಕ ಸ್ಥಗಿತಗೊಂಡಿರುವುದರಿಂದ ಜಾಗತಿಕ ಸರಪಳಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಅನಿಲ ಪೂರೈಕೆಯಲ್ಲಿ ಉಂಟಾಗುವ ಕಡಿತ ಭಾರತ ಸೇರಿದಂತೆ ಅನೇಕ ದೇಶಗಳ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇಂಧನ ಭದ್ರತೆ ದೃಷ್ಟಿಯಿಂದ ಭಾರತ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾದ ಅನಿವಾರ್ಯತೆ ಎದುರಾಗಿದೆ .
ಈ ದಾಳಿಯಿಂದ ಕತಾರ್ಗೆ ವರ್ಷಕ್ಕೆ ಸುಮಾರು 20 ಬಿಲಿಯನ್ ಡಾಲರ್ ಆದಾಯ ನಷ್ಟವಾಗುವ ಸಾಧ್ಯತೆ ಇದೆ. ಜೊತೆಗೆ, ವರ್ಷಕ್ಕೆ ಸುಮಾರು 12.8 ಮಿಲಿಯನ್ ಟನ್ ಎಲ್ಎನ್ಜಿ (LNG) ಪೂರೈಕೆಯಲ್ಲಿ ಮುಂದಿನ 3 ರಿಂದ 5 ವರ್ಷಗಳವರೆಗೆ ವ್ಯತ್ಯಯ ಉಂಟಾಗಬಹುದು .
ಈ ಬೆಳವಣಿಗೆ ಏಷ್ಯಾ ಹಾಗೂ ಐರೋಪ್ಯ ರಾಷ್ಟ್ರಗಳಿಗೂ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಭಾರತ ಮತ್ತು ಚೀನಾ ಸೇರಿದಂತೆ ಅನೇಕ ದೇಶಗಳು ಕತಾರ್ ಅನಿಲದ ಮೇಲೆ ಅವಲಂಬಿತವಾಗಿರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಲಕ್ಷಣಗಳು ಗೋಚರಿಸುತ್ತಿವೆ .
ಒಟ್ಟಿನಲ್ಲಿ, ಕತಾರ್ನಲ್ಲಿ ನಡೆದ ಈ ದಾಳಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆಯನ್ನುಂಟುಮಾಡಿದ್ದು, ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ .
