Ashwaveega News 24×7 ಫೆಬ್ರವರಿ 10 -2026 – ಬೆಂಗಳೂರು : ರಾಜ್ಯದ ಆಡಳಿತದ ಕೇಂದ್ರಬಿಂದು ಆಗಿರುವ ಶಕ್ತಿಸೌಧ ವಿಧಾನ ಸೌಧದಲ್ಲೇ ಚಿನ್ನಾಭರಣ ಹಾಗೂ ನಗದು ಕಳ್ಳತನ ನಡೆದಿರುವ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ . ಪ್ರಭಾವಿ ಸಚಿವ ಬೈರತಿ ಸುರೇಶ್ರವರ ಕಚೇರಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳ್ಳತನವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಸುಮಾರು 300 ಗ್ರಾಂ ಚಿನ್ನಾಭರಣ ಹಾಗೂ 1.5 ಲಕ್ಷ ರೂ. ನಗದು ಇದ್ದ ಬ್ಯಾಗ್ ಕಚೇರಿಯಿಂದ ನಾಪತ್ತೆಯಾಗಿದೆ. ಕೆಲಸದ ನಿಮಿತ್ತ ಸಚಿವರ ಕಚೇರಿಗೆ ಆಗಮಿಸಿದ್ದ ನವೀನ್ ಎಂಬ ವ್ಯಕ್ತಿ, ಚಿನ್ನಾಭರಣ ಮತ್ತು ಹಣವಿದ್ದ ಬ್ಯಾಗ್ನ್ನು ಕಚೇರಿಯಲ್ಲಿ ಮರೆತು ಬಿಟ್ಟು ತೆರಳಿದ್ದಾನೆ .
ಮಾರನೇ ದಿನ ಕಚೇರಿಗೆ ಮರಳಿ ಬಂದು ಪರಿಶೀಲನೆ ನಡೆಸಿದಾಗ, ಬ್ಯಾಗ್ ಕಚೇರಿಯಲ್ಲಿ ಕಾಣೆಯಾಗಿದ್ದು, ತಕ್ಷಣವೇ ವಿಷಯವನ್ನು ಸಂಬಂಧ ಪಟ್ಟವರಿಗೆ ತಿಳಿಸಿದ್ದಾನೆ. ಈ ಸಂಬಂಧ ನವೀನ್ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಿದ್ದಾರೆ.
ದೂರು ದಾಖಲಿಸಿಕೊಂಡ ವಿಧಾನಸೌಧ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, DPAR ಇಲಾಖೆಯ ಡಿ-ಗ್ರೂಪ್ ನೌಕರನೊಬ್ಬ ಬ್ಯಾಗ್ನ್ನು ಹಿಡಿದುಕೊಂಡು ಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ ಆಗಿರುವುದು ಪತ್ತೆಯಾಗಿದೆ.
ಸಾಕ್ಷ್ಯಾಧಾರಗಳ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಮುಂದಿನ ತನಿಖೆ ಮುಂದುವರಿದಿದೆ. ಶಕ್ತಿಸೌಧದಂತಹ ಅತ್ಯಂತ ಭದ್ರತಾ ಪ್ರದೇಶದಲ್ಲೇ ಕಳ್ಳತನ ನಡೆದಿರುವುದು ಭದ್ರತಾ ವ್ಯವಸ್ಥೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆ ಮೂಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸೌಧ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಳ್ಳುವ ಕಾರ್ಯವೂ ಪ್ರಗತಿಯಲ್ಲಿದೆ.
