Ashwaveega News 24×7 ಫೆಬ್ರವರಿ 06 -2026 –ಕನಕಪುರ : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಸಿನಿಮಾ ನಿರ್ಮಾಪಕ ಹಾಗೂ ಕಾಂಗ್ರೆಸ್ ಮುಖಂಡ ಕನಕಪುರ ಶ್ರೀನಿವಾಸ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಕನಕಪುರ ಬಂಡೆ” ಎನ್ನುವ ವಿಚಾರದಲ್ಲೇ ಡಿಕೆಶಿ ವಿರುದ್ಧ ಬಾಂಬ್ ಸಿಡಿಸಿದ್ದಾರೆ.
“ಒಂದು ಕಾಲದಲ್ಲಿ ಡಿಕೆಶಿಗೆ ಜಾವಾ ಬೈಕ್ಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಕೂಡ ಹಣ ಇರಲಿಲ್ಲ. ಆ ಸಮಯದಲ್ಲಿ ನಾನೇ ಪೆಟ್ರೋಲ್ಗೆ ಹಣ ಕೊಟ್ಟಿದ್ದೆ. ಕನಕಪುರದಲ್ಲಿ ಮೊದಲ ‘ಬಂಡೆ’ ಅಂದ್ರೆ ಅದು ನಾನೇ” ಎಂದು ಕನಕಪುರ ಶ್ರೀನಿವಾಸ್ ಹೇಳಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿದ ಅವರು, “ನನ್ನ ಹೆಸರು ಜನಪ್ರಿಯವಾದ ನಂತರ ಅದನ್ನೇ ಅವರು ಬಳಸಿಕೊಳ್ಳಲು ಶುರುಮಾಡಿದರು. ಅಧಿಕಾರಕ್ಕೆ ಬಂದ ನಂತರ ನನ್ನ ಹೆಸರನ್ನೇ ತಮ್ಮ ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ” ಎಂದು ಆರೋಪಿಸಿದರು.
“ಕನಕಪುರದಲ್ಲಿ ‘ಬಂಡೆ’ ಅನ್ನೋ ಹೆಸರು ನನ್ನಿಂದಲೇ ಪ್ರಚಲಿತಕ್ಕೆ ಬಂತು. ಆದರೆ ಇಂದು ಆ ಹೆಸರಿನ ಕ್ರೆಡಿಟ್ ಬೇರೆವರಿಗೆ ಹೋಗ್ತಿದೆ” ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕನಕಪುರ ರಾಜಕೀಯ ವಲಯದಲ್ಲಿ ಈಗಾಗಲೇ ನಾಯಕತ್ವದ ವಿಚಾರವಾಗಿ ಚರ್ಚೆಗಳು ನಡೆಯುತ್ತಿರುವ ನಡುವೆ, ಕನಕಪುರ ಶ್ರೀನಿವಾಸ್ ಹೇಳಿಕೆ ಹೊಸ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಡಿಕೆಶಿ ಪಾಳಯದಿಂದ ಈ ಆರೋಪಗಳಿಗೆ ಏನು ಪ್ರತಿಕ್ರಿಯೆ ಬರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
