Ashwaveega News 24×7 ಫೆಬ್ರವರಿ 08 -2026 – ಬೆಂಗಳೂರು : ನಟ ದರ್ಶನ್ ಸಂಬಂಧಿಸಿದ ಹೇಳಿಕೆಗಳ ವಿಚಾರವಾಗಿ ನಟ ಹಾಗೂ ನಿರ್ದೇಶಕ ಜೋಗಿ ಪ್ರೇಮ್ ಅವರು ಕನಕಪುರ ಶ್ರೀನಿವಾಸ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕವಾಗಿ ಮಾಡಲಾದ ಕೆಲವು ಹೇಳಿಕೆಗಳು ತಮ್ಮ ಮಾನಹಾನಿಗೆ ಕಾರಣವಾಗಿವೆ ಎಂದು ಆರೋಪಿಸಿರುವ ಅವರು, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
“ದರ್ಶನ್ ಹೊರಗಿದ್ದಾಗಲೇ ಈ ರೀತಿಯ ಮಾತುಗಳನ್ನು ಮಾತನಾಡಬೇಕಿತ್ತು. ಈಗ ಎಲ್ಲೆಲ್ಲೋ ಕುಳಿತು ಹೇಳಿಕೆ ನೀಡುವುದು ಸರಿಯಲ್ಲ. ನನ್ನ ಮನೆ ಚಂದ್ರಲೇಔಟ್ನಲ್ಲಿ ಇದೆ, ಬೇಕಿದ್ದರೆ ಅಲ್ಲಿಗೆ ಬಂದು ಮಾತಾಡಲಿ,” ಎಂದು ಜೋಗಿ ಪ್ರೇಮ್ ಗುಡುಗಿದ್ದಾರೆ.
ಹಣಕಾಸು ಸಂಬಂಧಿತ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, “ನಾನು ಹಣ ತೆಗೆದುಕೊಂಡಿದ್ದೆ ಎಂಬುದು ನಿಜ. ಆದರೆ ಅದನ್ನು ಆಗಲೇ ವಾಪಸ್ ಕೊಟ್ಟಿದ್ದೇನೆ,” ಎಂದು ಸ್ಪಷ್ಟಪಡಿಸಿದರು. ತಮ್ಮ ಬಗ್ಗೆ ಮಾತ್ರವಲ್ಲದೆ ನಟ ದರ್ಶನ್ ಹಾಗೂ ಪುನೀತ್ ರಾಜಕುಮಾರ್ (ಅಪ್ಪು) ಕುರಿತು ಕೂಡ ಅವಹೇಳನಕಾರಿ ಮಾತುಗಳನ್ನು ಆಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಇದಲ್ಲದೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುರಿತು ಸಹ ಅನಾವಶ್ಯಕ ಮತ್ತು ಅಶಿಷ್ಟ ಭಾಷೆ ಬಳಸಲಾಗಿದೆ ಎಂದು ಜೋಗಿ ಪ್ರೇಮ್ ಹೇಳಿದ್ದಾರೆ. “ನನ್ನ ಬಗ್ಗೆ ಮಾತನಾಡಲು ಯೋಗ್ಯತೆ ಇರಬೇಕು. ನನಗೂ ಅವರಿಗಿಂತ ಚೆನ್ನಾಗಿ ಮಾತನಾಡಲು ಬರುತ್ತದೆ, ಆದರೆ ನಾನು ಸಂಯಮ ಕಾಪಾಡಿಕೊಂಡಿದ್ದೇನೆ,” ಎಂದು ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಜೋಗಿ ಪ್ರೇಮ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಫಿಲ್ಮ್ ಚೇಂಬರ್)ಗೆ ದೂರು ಸಲ್ಲಿಸಿರುವುದಲ್ಲದೆ, ಕೆ.ಪಿ. ಅಗ್ರಹಾರ ಪೊಲೀಸ್ ಠಾಣೆಯಲ್ಲಿಯೂ ಕನಕಪುರ ಶ್ರೀನಿವಾಸ್ ವಿರುದ್ಧ ದೂರು ದಾಖಲಿಸಿದ್ದಾರೆ. ಮುಂದಿನ ಹಂತವಾಗಿ ಮಾನಹಾನಿ ಮೊಕದ್ದಮೆ ಹೂಡುವುದಾಗಿ ಅವರು ತಿಳಿಸಿದ್ದಾರೆ.
ಈ ವಿಚಾರವು ಕನ್ನಡ ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದ್ದು, ಇನ್ನೂ ಕನಕಪುರ ಶ್ರೀನಿವಾಸ್ ಅವರ ಪ್ರತಿಕ್ರಿಯೆ ಲಭ್ಯವಾಗಿಲ್ಲ .
