Ashwaveega News 24×7 – ಬೆಂಗಳೂರು, ಜನವರಿ 9: ರಿಷಬ್ ಶೆಟ್ಟಿ ನಿರ್ದೇಶನದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದಲ್ಲಿ ಗಡಿಭಾಗದ ಕನ್ನಡ ಶಾಲೆಯ ಮಕ್ಕಳಿಗೆ ಎದುರಾಗಿರುವ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಲಾಗಿತ್ತು. ಕನ್ನಡದ ಮೇಲೆ ಕೇರಳ ಸರ್ಕಾರ ಸವಾರಿ ಮಾಡುವ ತರಲೆ ಬಿಟ್ಟಿಲ್ಲ. ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುತ್ತಿದೆ. ಕೇರಳ ಸರ್ಕಾರದ ಪ್ರಸ್ತಾಪಿತ ಮಲೆಯಾಳಿ ಭಾಷಾ ಮಸೂದೆ-2025 ಜಾರಿಗೆ ತರಲು ಹೊರಟ್ಟಿದ್ದು, ಕರ್ನಾಟಕದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.ಇದೀಗ ಗಡಿಭಾಗದ ಕಾಸರಗೋಡಿನಲ್ಲಿ ಮಕ್ಕಳ ಮೇಲೆ ಮಲಯಾಳ ಹೇರಿಕೆ ಮಾಡಲಾಗುತ್ತಿದೆ ಎಂಬ ಆರೋಪ ಮತ್ತೆ ಕೇಳಿಬಂದಿದೆ. ಇದಕ್ಕೆ ಕಾರಣ ಕೇರಳ ಸರ್ಕಾರದ ಮಲಯಾಳ ಭಾಷಾ ಮಸೂದೆ. ಮಸೂದೆಯಲ್ಲೇನಿದೆ ? ಕನ್ನಡಿಗರಿಗೆ, ಕನ್ನಡ ಶಾಲೆಗಳಿಗೇಕೆ ಆತಂಕ ?
ಕೇರಳದಲ್ಲಿ (Kerala) ಮೂರ್ನಾಲ್ಕು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇತ್ತೀಚೆಗೆ ಬೆಂಗಳೂರಿನ ಕೋಗಿಲು ಲೇಔಟ್ನ ಅಕ್ರಮ ಕಟ್ಟಡಗಳ ತೆರವು ವಿಚಾರದಲ್ಲಿ ಮೂಗು ತೂರಿಸಿದ್ದ ಕೇರಳ ಸರ್ಕಾರ, ಇದೀಗ ಕನ್ನಡಿಗರಿಗೆ ಮತ್ತೆ ಕಾಟ ಕೊಡಲು ಮುಂದಾಗಿದೆ. ಕೇರಳದಲ್ಲಿ ‘ಮಲಯಾಳ ಭಾಷಾ ಮಸೂದೆ 2025’ಗೆ (Malayalam language bill 2025) ಅನುಮೋದನೆ ಪಡೆಯಲಾಗಿದೆ. ಇದು ಕಾನೂನಾಗಿ ಜಾರಿಗೊಂಡಲ್ಲಿ ಕರ್ನಾಟಕ ಗಡಿಭಾಗದ ಕಾಸರಗೋಡು ಮತ್ತು ಮಂಜೇಶ್ವರ ಪ್ರದೇಶದ ಕನ್ನಡ (Kannada) ಭಾಷೆಯ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಕೇರಳ ಸರ್ಕಾರದ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಮಸೂದೆ ವಾಪಸ್ ಪಡೆಯುವಂತೆ ಕೇರಳ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಿಎಂ ಟ್ವೀಟ್ನಲ್ಲೇನಿದೆ?
ಕೇರಳ ಸರ್ಕಾರದ ನಡೆಯನ್ನ ಸಿಎಂ ಸಿದ್ದರಾಮಯ್ಯ ತೀವ್ರವಾಗಿ ವಿರೋಧಿಸಿದ್ದು, ಸಂವಿಧಾನ ಖಾತರಿ ಮಾಡಿರುವ ಭಾಷಾ ಸ್ವಾತಂತ್ರ್ಯದ ಮೇಲಿನ ಪ್ರಹಾರ ಎಂದು ಟ್ವೀಟ್ ಮೂಲಕ ವಿಷಾದಿಸಿದ್ದಾರೆ. ಇಂತಹದ್ದೊಂದು ಕಾನೂನು ಜಾರಿಗೆ ಬಂದರೆ ಕೇರಳದ ಗಡಿಜಿಲ್ಲೆಗಳಲ್ಲಿ ಮುಖ್ಯವಾಗಿ ಕಾಸರಗೋಡಿನಲ್ಲಿ ವಾಸಿಸುತ್ತಿರುವ ಕನ್ನಡಿಗರು ಮಾತೃಭಾಷೆಯನ್ನು ಕಲಿಯುವ ಅವಕಾಶದಿಂದ ವಂಚಿತರಾಗಲಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಮೂಲಭೂತ ಹಕ್ಕನ್ನು ದಮನ ಮಾಡುವ ಇಂತಹ ನಡೆಯನ್ನು ಕೇರಳದ ಕಮ್ಯುನಿಸ್ಟ್ ಸರ್ಕಾರದಿಂದ ನಾವು ನಿರೀಕ್ಷಿಸಿರಲಿಲ್ಲ ಅಂತಾ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಕೇರಳ ವಿಧಾನಸಭೆ ಅಂಗೀಕರಿಸಿರುವ ಮಲೆಯಾಳಿ ಭಾಷಾ ಮಸೂದೆ-2025 ಅನ್ನು ತಕ್ಷಣ ಹಿಂದೆಗೆದುಕೊಳ್ಳಬೇಕೆಂದು ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರಿಗೆ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ…
