ರಾಜ್ಯ ಸರ್ಕಾರ 2024-25ನೇ ಸಾಲಿಗೆ ಖಾಸಗಿ ಶಾಲೆಗಳಿಗೆ ಹೊಸದಾಗಿ ಶಾಶ್ವತ ಅನುದಾನರಹಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಪ್ರಾರಂಭಿಸಲು ನೊಂದಣಿ ಹಾಗೂ ಶಾಲಾ ಡ್ರೆಸ್ ಕೋಡ್ ಪಡೆಯುವ ಕುರಿತು ಅವಧಿಯನ್ನು ವಿಸ್ತರಿಸಿದೆ.
ಕರ್ನಾಟಕ ಶಿಕ್ಷಣ ಕಾಯ್ದೆ-1983ರ ನಿಯಮ 30, 31 ಮತ್ತು 32ರಂತೆ ಹಾಗೂ ದಿನಾಂಕ: 07-03-2018ರ ಅಧಿಸೂಚನೆಯಂತೆ, ಹೊಸ ಶಾಲಾ ನೋಂದಣಿ ಮತ್ತು ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ಕೋರಿ, ಶೈಕ್ಷಣಿಕ ವರ್ಷದ ಹಿಂದಿನ ಸಾಲಿನ ನವೆಂಬರ್ 30 ಅಥವಾ ಅದಕ್ಕೂ ಮೊದಲು ಇಲಾಖಾ ವೆಬ್ಸೈಟ್ನಲ್ಲಿ ಹೊಸ ಶಾಲಾ ನೋಂದಣಿ ಕುರಿತು ಅರ್ಜಿ ಸಲ್ಲಿಸಿ ನೊಂದಣಿ ಪಡೆಯಬೇಕಾಗುತ್ತದೆ.
2024-25ನೇ ಸಾಲಿಗೆ ಖಾಸಗಿ ಅನುದಾನರಹಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ನೊಂದಣಿ ಮತ್ತು ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಉದ್ದೇಶಿಸಿರುವ ಸಂಸ್ಥೆಗಳು, ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು 04-09-2024 ರಿಂದ 21-09-2024ರವರೆಗೆ ಅವಕಾಶ ನೀಡಲಾಗಿದೆ.
ಈಗಾಗಲೇ 2024-25ನೇ ಸಾಲಿಗೆ ಹೊಸ ಶಾಲಾ ನೊಂದಣಿ ಮತ್ತು ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಅರ್ಜಿ ಸಲ್ಲಿಸಿ ತಿರಸ್ಕೃತಗೊಂಡ ಆಡಳಿತ ಮಂಡಳಿಗಳಿಗೆ ಹಾಗೂ ಹೊಸದಾಗಿ ಅರ್ಜಿಗಳನ್ನು ಸಲ್ಲಿಸುವ ಆಡಳಿತ ಮಂಡಳಿಗಳಿಗೆ ಈ ಅವಕಾಶ ಅನ್ವಯವಾಗುತ್ತದೆ.
ಈ ಬಗ್ಗೆ ಶಾಲಾ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.