Ashwaveega News 24×7 ಫೆಬ್ರವರಿ 2026 : ಕೇಂದ್ರ ಸರ್ಕಾರದ ತೆರಿಗೆ ನೀತಿ ಹಾಗೂ ಐಟಿ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಉದ್ಯಮಿಗಳ ಅಸಮಾಧಾನ ಮತ್ತೊಮ್ಮೆ ಸ್ಫೋಟಗೊಂಡಿದೆ. ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ, ದೇಶದ ಪ್ರಮುಖ ಉದ್ಯಮಿ ಮೋಹನ್ ದಾಸ್ ಪೈ ಅವರು ಐಟಿ ದಾಳಿ ಪ್ರಕ್ರಿಯೆ ವಿರುದ್ಧ ಕಿಡಿಕಾರಿದ್ದಾರೆ.
ಮೋದಿ ಪ್ರಧಾನಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಟ್ಯಾಗ್ ಮಾಡಿ ‘X’ ನಲ್ಲಿ ಪೋಸ್ಟ್ ಮಾಡಿರುವ ಮೋಹನ್ ದಾಸ್ ಪೈ, “ಆಗ ಸಿದ್ಧಾರ್ಥ್, ಈಗ ಸಿ.ಜೆ. ರಾಯ್. ಇದು ತೆರಿಗೆ ಸಂಗ್ರಹವಲ್ಲ, ತೆರಿಗೆ ಭಯೋತ್ಪಾದನೆ” ಎಂದು ಕಟುವಾಗಿ ಟೀಕಿಸಿದ್ದಾರೆ. ಸಿ.ಜೆ. ರಾಯ್ ಪ್ರಕರಣದ ಬಗ್ಗೆ ಪಾರದರ್ಶಕ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಐಟಿ ಅಧಿಕಾರಿಗಳ ದಾಳಿಯ ಪ್ರಕ್ರಿಯೆಯೇ ಕ್ರೂರವಾಗಿದ್ದು, ಅನೇಕ ಉದ್ಯಮಿಗಳು ಐಟಿ ಟಾರ್ಚರ್ನಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಮೋಹನ್ ದಾಸ್ ಪೈ ಆರೋಪಿಸಿದ್ದಾರೆ. ತೆರಿಗೆ ಕಟ್ಟುವವರನ್ನೇ ಶತ್ರುಗಳಂತೆ ನೋಡಲಾಗುತ್ತಿದೆ ಎಂಬ ಭಾವನೆ ಉದ್ಯಮಿಗಳಲ್ಲಿ ಗಟ್ಟಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
“ತೆರಿಗೆ ಅಧಿಕಾರಿಗಳಿಂದ ಉದ್ಯಮಿಗಳು ಭಯಭೀತರಾಗಿದ್ದಾರೆ. ಇದು ಕೇವಲ ಆರ್ಥಿಕ ಸಮಸ್ಯೆಯಲ್ಲ, ದೇಶದಲ್ಲಿ ನಾಗರಿಕ ಹಕ್ಕುಗಳ ಮೇಲಿನ ನೇರ ದಾಳಿ” ಎಂದು ಪೈ ಆತಂಕ ವ್ಯಕ್ತಪಡಿಸಿದ್ದಾರೆ. ಇಂತಹ ಅಧಿಕಾರಿಗಳಿಗೆ ವಿತ್ತ ಸಚಿವೆ ಹೆಚ್ಚುವರಿ ಅಧಿಕಾರ ನೀಡುತ್ತಿದ್ದೀರಾ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.
ತಪ್ಪಾಗಿ ರೇಡ್ ಮಾಡಿದ ಐಟಿ ಅಧಿಕಾರಿಗಳಿಗೆ ಯಾವತ್ತಾದರೂ ಶಿಕ್ಷೆ ನೀಡಿದ್ದೀರಾ ? ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ. “ಟ್ಯಾಕ್ಸ್ ಟೆರರಿಸಂನಿಂದ ನಾವು ಸಿದ್ಧಾರ್ಥ್ ಅವರನ್ನು ಕಳೆದುಕೊಂಡಿದ್ದೇವೆ. ಈಗ ಸಿ.ಜೆ. ರಾಯ್ ಪ್ರಕರಣವೂ ಅದೇ ಹಾದಿಯಲ್ಲಿ ಹೋಗುತ್ತಿದೆಯಾ?” ಎಂದು ಮೋಹನ್ ದಾಸ್ ಪೈ ಕಟುವಾಗಿ ಪ್ರಶ್ನಿಸಿದ್ದಾರೆ.
ಐಟಿ ದಾಳಿಗಳಿಂದ ಅನೇಕ ಉದ್ಯಮಿಗಳು, ತೆರಿಗೆದಾರರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಜನಸಾಮಾನ್ಯರನ್ನು ರಕ್ಷಿಸೋವರು ಯಾರು ? ಎಂಬ ಪ್ರಶ್ನೆ ದೇಶದಾದ್ಯಂತ ಕೇಳಿಬರುತ್ತಿದ್ದು, ಕೇಂದ್ರ ಸರ್ಕಾರ ಈ ಕುರಿತು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕೆಂಬ ಒತ್ತಾಯ ದಿನೇದಿನೇ ಹೆಚ್ಚಾಗುತ್ತಿದೆ.
