ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್, ಕನ್ನಡಿಗ ಕೆಎಲ್ ರಾಹುಲ್ ಬಹಳ ದಿನಗಳ ನಂತರ ಮತ್ತೊಮ್ಮೆ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. 2024 ರ ಐಪಿಎಲ್ ವೇಳೆ ಇಂಜುರಿಗೆ ತುತ್ತಾಗಿದ್ದ ರಾಹುಲ್, ಚೇತರಿಸಿಕೊಂಡ ನಂತರ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿದಿದ್ದರು. ಆದರೆ ಲಂಕಾ ವಿರುದ್ಧದ ಸರಣಿಯಲ್ಲಿ ರಾಹುಲ್ ಪ್ರದರ್ಶನ ಅಷ್ಟಕಷ್ಟೆಯಾಗಿತ್ತು. ಹೀಗಾಗಿ ಮೂರನೇ ಏಕದಿನ ಪಂದ್ಯದಿಂದ ರಾಹುಲ್ರನ್ನು ತಂಡದಿಂದ ಕೈಬಿಡಲಾಗಿತ್ತು. ಲಂಕಾ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ ರಾಹುಲ್ಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗುವುದು ಕಷ್ಟಕರ ಎಂದು ಹೇಳಲಾಗುತ್ತಿದೆ. ಇದೆಲ್ಲದರ ನಡುವೆ, ಕೆಎಲ್ ರಾಹುಲ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವದಂತಿಯೊಂದು ಹರಿದಾಡಲಾರಂಭಿಸಿದೆ. ಕೆಎಲ್ ರಾಹುಲ್ ಅವರದ್ದೇ ಎಂದು ಬಿಂಬಿಸಿರುವ ಇನ್ಸಟಾಗ್ರಾಮ್ ಪೋಸ್ಟ್ವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಪೋಸ್ಟ್ನಲ್ಲಿ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿರುವ ಬಗ್ಗೆ ಮಾಹಿತಿ ಇದೆ.
ವೈರಲ್ ಪೋಸ್ಟ್ನಲ್ಲಿ ಇರುವುದೇನು?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ, ‘ಸಾಕಷ್ಟು ಯೋಚಿಸಿದ ಬಳಿಕ ನಾನು ವೃತ್ತಿಪರ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ಈ ನಿರ್ಧಾರವು ಸುಲಭವಲ್ಲ, ಏಕೆಂದರೆ ಅನೇಕ ವರ್ಷಗಳಿಂದ ಕ್ರಿಕೆಟ್ ನನ್ನ ಜೀವನದ ಪ್ರಮುಖ ಭಾಗವಾಗಿದೆ. ನನ್ನ ವೃತ್ತಿಜೀವನದುದ್ದಕ್ಕೂ ನನ್ನನ್ನು ಬೆಂಬಲಿಸಿದ ನನ್ನ ಕುಟುಂಬ, ಸ್ನೇಹಿತರು, ತಂಡದ ಸಹ ಆಟಗಾರರು ಮತ್ತು ಅಭಿಮಾನಿಗಳಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಮೈದಾನದ ಒಳಗೆ ಮತ್ತು ಹೊರಗೆ ನಾನು ಪಡೆದ ಅನುಭವಗಳು ಮತ್ತು ನೆನಪುಗಳು ನಿಜವಾಗಿಯೂ ಬೆಲೆಕಟ್ಟಲಾಗದವು. ನನ್ನ ದೇಶವನ್ನು ಪ್ರತಿನಿಧಿಸಲು ಮತ್ತು ಅನೇಕ ಪ್ರತಿಭಾವಂತ ಕ್ರಿಕೆಟಿಗರೊಂದಿಗೆ ಆಡಿದ್ದು ನನಗೆ ಹೆಮ್ಮೆ ತಂದಿದೆ. ಈ ಅದ್ಭುತ ಪ್ರಯಾಣದ ಭಾಗವಾಗಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು’ ಎಂದು ಬರೆದಿದೆ.
ರಾಹುಲ್ ಅವರ ಅಸಲಿ ಪೋಸ್ಟ್ನಲ್ಲಿ ಇರುವುದೇನು?
ವಾಸ್ತವವಾಗಿ ಕೆಎಲ್ ರಾಹುಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿರುವುದು ನಿಜ. ಆದರೆ ಆ ಪೋಸ್ಟ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯಕ್ಕೆ ಸಂಬಂಧಿಸಿದಲ್ಲ. ಬದಲಿಗೆ ರಾಹುಲ್ ಅವರ ಪೋಸ್ಟ್ನಲ್ಲಿರುವುದೇನೆಂದರೆ… ‘ನಾನು ನಿಮ್ಮ ಬಳಿ ಏನ್ನನ್ನೋ ಹೇಳಬೇಕಿದೆ.. ಕಾಯುತ್ತಿರಿ‘ (I have an announcement to make, stay tuned) ಎಂದು ಬರೆದುಕೊಂಡಿದ್ದಾರೆ. ಆದರೆ ರಾಹುಲ್ ಅವರ ಈ ಪೋಸ್ಟ್ ಅನ್ನು ತಿರುಚಿರುವ ಕಿಡಿಗೇಡಿಗಳು ರಾಹುಲ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ ಎಂಬ ವದಂತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿಸಲಾರಂಭಿಸಿದ್ದಾರೆ.