Ashwaveega News 24×7 ಫೆಬ್ರವರಿ 03 -2026 : ಪೊಲೀಸ್ ಇಲಾಖೆಯ ಒಳಗಿನ ಅಸಮಾಧಾನವನ್ನು ಬಹಿರಂಗಪಡಿಸುವಂತಿರುವ ವಾಟ್ಸಪ್ ಸ್ಟೇಟಸ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಕೊಪ್ಪಳ ಜಿಲ್ಲೆಯ ಹನುಮಸಾಗರ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಬ್ರಹ್ಮಾನಂದ, ತಮ್ಮ ಬೇಸರವನ್ನು ವಾಟ್ಸಪ್ ಸ್ಟೇಟಸ್ ಮೂಲಕ ವ್ಯಕ್ತಪಡಿಸಿದ್ದು, ಇದೀಗ ಇಲಾಖೆ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.
ಬ್ರಹ್ಮಾನಂದ ತಮ್ಮ ಸ್ಟೇಟಸ್ನಲ್ಲಿ, “365 ದಿನ ಡ್ಯೂಟಿ ಮಾಡಬೇಕು. ಒಂದು ದಿನವೂ ರಜೆ ಇಲ್ಲ. ವರ್ಷ ಪೂರ್ತಿ ಕೆಲಸ ಮಾಡಬೇಕು, ಆದರೆ ಒಂದು ದಿನ ರಜೆ ಸಿಗಲ್ಲ. ಇದಕ್ಕಿಂತ ಎಗ್ರೈಸ್ ಮಾರಿಕೊಂಡು ಬದುಕೋದೇ ಬೆಟರ್” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, “ಪೊಲೀಸ್ ಇಲಾಖೆಗೆ ಸೇರುವ ಮುನ್ನ 100 ಸಲ ಯೋಚಿಸಿ. ಪೊಲೀಸ್ ಡಿಪಾರ್ಟ್ಮೆಂಟ್ಗಿಂತ ಬೇರೆ ಕೆಲಸನೇ ಉತ್ತಮ” ಎಂಬ ಮಾತುಗಳನ್ನು ಕೂಡ ಅವರು ಬರೆದಿದ್ದಾರೆ. ಪೊಲೀಸ್ ಕಾನ್ಸ್ಟೇಬಲ್ನ ಈ ಸ್ಟೇಟಸ್ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಪೊಲೀಸ್ ಸಿಬ್ಬಂದಿಯ ಕೆಲಸದ ಒತ್ತಡ, ರಜೆ ಸಮಸ್ಯೆ ಹಾಗೂ ಕಾರ್ಯಭಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆರಂಭವಾಗಿದೆ.
ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮ್ ಅರಸಿದ್ದಿ, ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಲು ಸೂಚನೆ ನೀಡಿದ್ದಾರೆ. ಹನುಮಸಾಗರ ಠಾಣೆಯ ಪೇದೆ ಬ್ರಹ್ಮಾನಂದ ಅವರ ಹೇಳಿಕೆಯ ಹಿನ್ನೆಲೆ ಹಾಗೂ ವಾಸ್ತವ ಸ್ಥಿತಿಯನ್ನು ತಿಳಿಯಲು ಆಂತರಿಕ ತನಿಖೆ ನಡೆಸುವಂತೆ ಎಸ್ಪಿ ಆದೇಶಿಸಿದ್ದಾರೆ.
ಒಟ್ಟಿನಲ್ಲಿ, ಪೊಲೀಸ್ ಇಲಾಖೆಯ ಒಳಗಿನ ಈ ಅಸಮಾಧಾನ ಭಾರಿ ಚರ್ಚೆಗೆ ಕಾರಣವಾಗಿದ್ದು, ಸಿಬ್ಬಂದಿಯ ಕಾರ್ಯಭಾರ ಮತ್ತು ಕಲ್ಯಾಣದ ಬಗ್ಗೆ ಮತ್ತೊಮ್ಮೆ ಗಮನ ಸೆಳೆದಿದೆ.
