Ashwaveega News 24×7 ಫೆಬ್ರವರಿ 07 -2026 ಬೆಂಗಳೂರು: ಚಲಿಸುತ್ತಿದ್ದ KSRTC ಬಸ್ನಲ್ಲಿ ರೀಲ್ಸ್ ನೋಡಿಕೊಂಡು ಚಾಲನೆ ಮಾಡುತ್ತಿದ್ದ ಚಾಲಕನ ನಿರ್ಲಕ್ಷ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಮೊಬೈಲ್ ಫೋನ್ ನೋಡುತ್ತಾ ಗಂಟೆಗೆ 70–80 ಕಿಲೋಮೀಟರ್ ವೇಗದಲ್ಲಿ ಬಸ್ ಚಾಲನೆ ಮಾಡುತ್ತಿದ್ದ ದೃಶ್ಯಗಳು ನೆಟ್ಟಿಗರನ್ನು ಬೆಚ್ಚಿಬೀಳುವಂತೆ ಮಾಡಿವೆ.
ಚಾಲಕನ ರೀಲ್ಸ್ ಹುಚ್ಚಿನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, “ಇದು ಸಾರ್ವಜನಿಕರ ಜೀವದ ಜೊತೆ ಆಟ” ಎಂಬ ಕಿಡಿಕಾರುವ ಪ್ರತಿಕ್ರಿಯೆಗಳು ಹರಿದುಬಂದಿವೆ. ಈ ವೀಡಿಯೋ ಕೊನೆಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರ ಗಮನಕ್ಕೂ ಬಂದಿದೆ.
ಚಾಲಕನ ನಿರ್ಲಕ್ಷ್ಯ ಪೂರ್ಣ ವರ್ತನೆ ಕಂಡು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸಚಿವರು KSRTC ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸಚಿವರ ಸೂಚನೆಯ ಬೆನ್ನಲ್ಲೇ ಎಚ್ಚೆತ್ತ KSRTC ಇಲಾಖೆ, ಬಸ್ ಚಾಲಕನನ್ನು ತಕ್ಷಣವೇ ಅಮಾನತು ಮಾಡಿದೆ.
ರೀಲ್ಸ್ ನೋಡುತ್ತಾ ಬಸ್ ಚಾಲನೆ ಮಾಡಿದ್ದ ಚಾಲಕ ಮಹೇಶ್ ಎಂದು ಗುರುತಿಸಲಾಗಿದ್ದು, ಸಾರ್ವಜನಿಕರ ಸುರಕ್ಷತೆ ಕಡೆಗಣಿಸಿದ ಆರೋಪದಡಿ ಅವರನ್ನು ಅಮಾನತು ಮಾಡಲಾಗಿದೆ.
ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಈ ರೀತಿಯ ನಿರ್ಲಕ್ಷ್ಯ ಸಹಿಸಲಾಗದು ಎಂಬ ಸ್ಪಷ್ಟ ಸಂದೇಶವನ್ನು KSRTC ಇಲಾಖೆ ಈ ಮೂಲಕ ನೀಡಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
