Ashwaveega News 24×7 ಜನವರಿ 25 : ದುನಿಯಾ ವಿಜಯ್ ಅಭಿನಯದ ಲ್ಯಾಂಡ್ಲಾರ್ಡ್ ಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿನ ಜಾತಿ ಅಸಮಾನತೆ ಮತ್ತು ಶೋಷಣೆಯ ವಿರುದ್ಧ ಧ್ವನಿ ಎತ್ತುವ ಕಥಾವಸ್ತು ಹೊಂದಿರುವ ಈ ಚಿತ್ರ ಸಂವಿಧಾನದ ಮೌಲ್ಯಗಳನ್ನು ಸಾರುತ್ತದೆ ಎಂದು ಸಿಎಂ ಹೇಳಿದ್ದಾರೆ .
“ಇವತ್ತಿನ ಸಮಾಜಕ್ಕೆ ಈ ಸಿನಿಮಾ ಬಹಳ ಅಗತ್ಯ. ನಾನು ಖಂಡಿತವಾಗಿ ಈ ಚಿತ್ರವನ್ನು ನೋಡುತ್ತೇನೆ. ಇದು ನಾನು ಸೇರಿ ಎಲ್ಲರೂ ನೋಡಲೇಬೇಕಾದ ಸಿನಿಮಾ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಲ್ಯಾಂಡ್ಲಾರ್ಡ್ ಶೋಷಿತ ವರ್ಗದ ಬದುಕು, ಅವರ ಹೋರಾಟದ ಕಥೆಯನ್ನು ತೆರೆಮೇಲೆ ತರುವ ಪ್ರಯತ್ನ ಮಾಡಿದೆ. ಸಮಾಜದ ಅಸಮಾನತೆಗಳ ವಿರುದ್ಧ ಸಂದೇಶ ನೀಡುವ ಈ ಚಿತ್ರಕ್ಕೆ ಈಗಾಗಲೇ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಚಿತ್ರಕ್ಕೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಸಿಎಂ, “ಶೀಘ್ರದಲ್ಲೇ ಲ್ಯಾಂಡ್ಲಾರ್ಡ್ ಸಿನಿಮಾ ನೋಡುತ್ತೇನೆ” ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ದುನಿಯಾ ವಿಜಯ್ ಹಾಗೂ ಚಿತ್ರದ ಸಂಪೂರ್ಣ ತಂಡಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಹಾರೈಸಿದರು. ಸಾಮಾಜಿಕ ಹೊಣೆಗಾರಿಕೆ ಇರುವ ವಿಷಯಾಧಾರಿತ ಚಿತ್ರಗಳು ಇನ್ನಷ್ಟು ಮೂಡಿಬರಲಿ ಎಂದು ಅವರು ಆಶಿಸಿದರು.
