Ashwaveega News 24×7 ಜನವರಿ 17 – ಬೀದರ್- ಕಲ್ಯಾಣ ಕರ್ನಾಟಕದ ಧೀಮಂತ ನಾಯಕ, ಸಹಕಾರಿ ಧುರೀಣ, ವೀರಶೈವ ಲಿಂಗಾಯತ ಸಮುದಾಯದ ಹಿರಿಯ ಮುಖಂಡ, ಮುತ್ಸದ್ದಿ ರಾಜಕಾರಣಿ ಹಾಗೂ ಮಾಜಿ ಸಾರಿಗೆ ಸಚಿವ, ಶತಾಯುಷಿ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ (103) ಅವರು ಶುಕ್ರವಾರ ರಾತ್ರಿ 10.50ರ ಸುಮಾರಿನಲ್ಲಿ ಲಿಂಗೈಕ್ಯರಾಗಿದ್ದಾರೆ.
ಕಳೆದ 10-12 ದಿನಗಳಿಂದ ವಯೋಸಹಜವಾದ ಕಾಯಿಲೆ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬೀದರ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಭಾಲ್ಕಿಯ ಮನೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿತ್ತು, ಶುಕ್ರವಾರ ರಾತ್ರಿ ಅವರ ಆತ್ಮ, ದೇಹವನ್ನು ತ್ಯಜಿಸಿತು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು.
ಕಳೆದ ಒಂದು ವಾರದಿಂದ ನಾಡಿನ ವಿವಿಧ ಮಠಗಳ ಪೀಠಾಧಿಪತಿಗಳು, ಹರಚರ ಗುರುಮೂರ್ತಿಗಳು, ಸಚಿವರು, ಶಾಸಕರು, ಸಮಾಜದ ಗಣ್ಯರು, ವಿವಿಧ ಪಕ್ಷಗಳ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಭಾಲ್ಕಿಗೆ ಆಗಮಿಸಿ ಭೀಮಣ್ಣ ಖಂಡ್ರೆ ಅವರನ್ನು ನೋಡಿ, ಆರೋಗ್ಯ ವಿಚಾರಿಸಿದ್ದರು. ಹಲವರು ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿ ಭೀಮಣ್ಣ ಖಂಡ್ರೆ ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದರು.
103 ವರ್ಷಗಳ ಸಾರ್ಥಕ ಹಾಗೂ ತುಂಬು ಜೀವನ ನಡೆಸಿದ್ದ ಭೀಮಣ್ಣ ಖಂಡ್ರೆ ಅವರು ಇಂದು ಎಲ್ಲರನ್ನೂ ಅಗಲಿದ್ದಾರೆ. ಅವರಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಮತ್ತು ಬೀದರ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಮರ ಕುಮಾರ ಖಂಡ್ರೆ ಸೇರಿ ಇಬ್ಬರು ಗಂಡು ಮಕ್ಕಳು ಹಾಗೂ ನಾಲ್ವರು ಪುತ್ರಿಯರಿದ್ದಾರೆ. ಇವರ ಮತ್ತೊಬ್ಬ ಪುತ್ರ ಮಾಜಿ ಶಾಸಕ ಡಾ. ವಿಜಯಕುಮಾರ್ ಖಂಡ್ರೆ 2019ರಲ್ಲಿ ನಿಧನಹೊಂದಿದ್ದರು.
