Ashwaveega News 24×7 ಏಪ್ರಿಲ್ 2 – 2026 : ನಗರದಲ್ಲಿ ಎಲ್ಪಿಜಿ (LPG) ಅಭಾವ ಗಂಭೀರ ರೂಪ ಪಡೆದುಕೊಂಡಿದ್ದು, ಆಟೋ ಚಾಲಕರ ಜೀವನ ಸಂಕಷ್ಟಕ್ಕೆ ತಳ್ಳಿದೆ. ದಿನನಿತ್ಯದ ಜೀವನ ಸಾಗಿಸಲು ಅಗತ್ಯವಾದ ಗ್ಯಾಸ್ ಸಿಗದೇ, ಚಾಲಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಚಾಲಕರು ಒತ್ತಾಯಿಸಿದ್ದಾರೆ.
“ಗ್ಯಾಸ್ ಸಿಗದೇ ನಾವು ದಿನಗೂಲಿ ಕೂಡ ಮಾಡೋಕಾಗ್ತಿಲ್ಲ. ಜೀವನ ನಡೆಸೋದು ತುಂಬಾ ಕಷ್ಟ ಆಗಿದೆ. ಆದ್ದರಿಂದ ಸಮಸ್ಯೆ ಸರಿಯಾಗುವವರೆಗೂ ತಿಂಗಳಿಗೆ ಕನಿಷ್ಠ ₹10,000 ಪರಿಹಾರ ನೀಡಬೇಕು,” ಎಂದು ಆಟೋ ಚಾಲಕರು ತಮ್ಮ ಬೇಡಿಕೆಯನ್ನು ವ್ಯಕ್ತಪಡಿಸಿದ್ದಾರೆ.
ಇನ್ನು, ಈ ಸಮಸ್ಯೆಯ ಬಗ್ಗೆ ಯಾವುದೇ ಜನಪ್ರತಿನಿಧಿಗಳು ಸ್ಪಂದಿಸದಿರುವುದಕ್ಕೆ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಶಾಸಕರು ಹಾಗೂ ಸಂಸದರು ಏನು ಮಾಡ್ತಿದ್ದಾರೆ? ಕೇಂದ್ರ ಸರ್ಕಾರದ ಜೊತೆ ಮಾತಾಡೋಕೆ ಆಗೋದಿಲ್ಲವಾ ?” ಎಂದು ಪ್ರಶ್ನಿಸಿದ್ದಾರೆ.
“ನೀವು ಎಸಿ ಕಾರ್ನಲ್ಲಿ ಓಡಾಡ್ತೀರಾ, ನಮ್ಮ ಸಮಸ್ಯೆ ನಿಮಗೆ ಗೊತ್ತಾಗಲ್ಲ. ನಾವು ದಿನವೂ ಗ್ಯಾಸ್ಗಾಗಿ ಗಂಟೆಗಳ ಕಾಲ ಕ್ಯೂನಲ್ಲಿ ನಿಲ್ಲ್ತಿದ್ದೇವೆ. ಆದರೂ ಗ್ಯಾಸ್ ಸಿಗ್ತಿಲ್ಲ,” ಎಂದು ಚಾಲಕರು ಬೇಸರ ವ್ಯಕ್ತಪಡಿಸಿದರು.
ಆಟೋ ಚಾಲಕರ ಪ್ರಕಾರ, ಗ್ಯಾಸ್ ಕೊರತೆಯಿಂದ ಆದಾಯ ಸಂಪೂರ್ಣವಾಗಿ ಕುಂಠಿತವಾಗಿದ್ದು, ಕುಟುಂಬವನ್ನು ನಡೆಸುವುದು ಕಷ್ಟಕರವಾಗಿದೆ. “ನಮ್ಮನ್ನು ಅಯ್ಯೋ ಅನಿಸಬೇಡಿ. ಸಮಸ್ಯೆ ಪರಿಹಾರ ಮಾಡದಿದ್ದರೆ ನಮ್ಮ ಜೀವನವೇ ಹಾಳಾಗುತ್ತದೆ,” ಎಂದು ಸರ್ಕಾರದ ಗಮನ ಸೆಳೆಯಲು ಚಾಲಕರು ಮನವಿ ಮಾಡಿದ್ದಾರೆ.
