Ashwaveega News 24×7 ಮಾರ್ಚ್ 10 – 2026 : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದೀಗ ಅಡುಗೆ ಮನೆಗಳಿಗೂ ತಟ್ಟಿದೆ . ಎಲ್ಪಿಜಿ ಸಿಲಿಂಡರ್ ಕೊರತೆಯಿಂದ ಹೋಟೆಲ್ ಉದ್ಯಮದಲ್ಲಿ ಆತಂಕ ಹೆಚ್ಚಾಗಿದೆ. ಗ್ಯಾಸ್ ಸಿಲಿಂಡರ್ ಪೂರೈಕೆ ವ್ಯತ್ಯಯವಾಗಿರುವುದರಿಂದ ಹಲವೆಡೆ ಅಡುಗೆ ಮನೆಯಲ್ಲಿ ಒಲೆ ಉರಿಯದ ಪರಿಸ್ಥಿತಿ ಎದುರಾಗುತ್ತಿದೆ.
ನಿನ್ನೆಯಿಂದ ಕಮರ್ಷಿಯಲ್ ಸಿಲಿಂಡರ್ ಪೂರೈಕೆ ಸ್ಥಗಿತಗೊಂಡಿದೆ ಎಂಬ ಮಾಹಿತಿ ಹೊರಬಂದಿದ್ದು, ಇದೇ ಸ್ಥಿತಿ ಮುಂದುವರಿದರೆ ಇಂದಿನಿಂದ ಹಲವು ಹೋಟೆಲ್ಗಳು ಬಂದ್ ಆಗುವ ಭೀತಿ ವ್ಯಕ್ತವಾಗಿದೆ . ಹಸಿವು ತೀರಿಸಲು ಹೋಟೆಲ್ಗೆ ಹೋದರೂ ತಿಂಡಿ ಸಿಗದ ಪರಿಸ್ಥಿತಿ ಎದುರಾಗಬಹುದು ಎಂದು ಹೋಟೆಲ್ ಮಾಲೀಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಗ್ಯಾಸ್ ಕೊರತೆ ಕೇವಲ ಕಮರ್ಷಿಯಲ್ ಬಳಕೆಗೆ ಮಾತ್ರವಲ್ಲ, ಗೃಹ ಬಳಕೆ ಸಿಲಿಂಡರ್ಗಳಿಗೂ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪ್ರಮುಖ ಡೀಲರ್ಗಳಿಗೂ ಸಿಲಿಂಡರ್ ಪೂರೈಕೆ ಸರಿಯಾಗಿ ಆಗುತ್ತಿಲ್ಲ ಎಂಬ ಮಾಹಿತಿ ದೊರಕಿದೆ .
ಈ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ P. C. Rao ಅವರು , ಕರ್ನಾಟಕದಾದ್ಯಂತ ಗ್ಯಾಸ್ ಸಿಲಿಂಡರ್ ಕೊರತೆ ಕಾಣಿಸುತ್ತಿದೆ ಎಂದು ಹೇಳಿ, ಸಮಸ್ಯೆಯನ್ನು ಕೇಂದ್ರ ಸರ್ಕಾರ ತಕ್ಷಣ ಪರಿಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ಹೋಟೆಲ್ ಮಾಲೀಕರ ಹೋರಾಟಕ್ಕೆ ಸಚಿವ M. C. Sudhakar ಕೂಡ ಧ್ವನಿಗೂಡಿಸಿದ್ದು, ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದು ದೊಡ್ಡ ಆತಂಕದ ಪರಿಸ್ಥಿತಿ ಎಂದು ತಿಳಿಸಿದ್ದಾರೆ .
ಒಟ್ಟಿನಲ್ಲಿ ಕೊಲ್ಲಿ ರಾಷ್ಟ್ರಗಳ ಯುದ್ಧದ ಪರಿಣಾಮ ಇದೀಗ ಅಡುಗೆಮನೆಗೂ ತಟ್ಟಿದ್ದು, ಗ್ಯಾಸ್ ಪೂರೈಕೆ ಸಮಸ್ಯೆ ಮುಂದುವರಿದರೆ ಹೋಟೆಲ್ ಉದ್ಯಮಕ್ಕೂ ಹಾಗೂ ಸಾಮಾನ್ಯ ಜನರಿಗೂ ಮತ್ತಷ್ಟು ತೊಂದರೆ ಎದುರಾಗುವ ಸಾಧ್ಯತೆ ಇದೆ.
