Ashwaveega News 24×7 ಮಾರ್ಚ್ 12 – 2026 : ಬೆಂಗಳೂರು : ನಗರದ ಹೃದಯ ಭಾಗವಾಗಿರುವ ಮೆಜೆಸ್ಟಿಕ್ ಪ್ರದೇಶದಲ್ಲಿ ಇದೀಗ ದೊಡ್ಡ ಬದಲಾವಣೆ ಕಂಡುಬಂದಿದೆ . ಹಲವು ವರ್ಷಗಳಿಂದ ಅನೈತಿಕ ಚಟುವಟಿಕೆಗಳು ಹಾಗೂ ಅಕ್ರಮ ವ್ಯಾಪಾರಗಳಿಂದ ಕಿರಿಕಿರಿ ಉಂಟಾಗುತ್ತಿದ್ದ ಮೆಜೆಸ್ಟಿಕ್ ಅಂಡರ್ಪಾಸ್ ಹಾಗೂ ಮೇಲ್ಸೇತುವೆ ಪ್ರದೇಶವನ್ನು ಪೊಲೀಸರು ಶುದ್ಧೀಕರಿಸಲು ಕ್ರಮ ಕೈಗೊಂಡಿದ್ದಾರೆ .
ಇದರಿಂದ ಇನ್ಮುಂದೆ ಮೆಜೆಸ್ಟಿಕ್ ಅಂಡರ್ಪಾಸ್ನಲ್ಲಿ ಓಡಾಡಲು ಸಾರ್ವಜನಿಕರಿಗೆ ಭಯ ಬೇಡ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮೇಲ್ಸೇತುವೆ ಹಾಗೂ ಅಂಡರ್ಪಾಸ್ಗಳಲ್ಲಿ ನಡೆಯುತ್ತಿದ್ದ ಫುಟ್ಪಾತ್ ವ್ಯಾಪಾರಕ್ಕೂ ಪೊಲೀಸರು ಸಂಪೂರ್ಣ ಬ್ರೇಕ್ ಹಾಕಿದ್ದಾರೆ .
ಈ ಹಿಂದೆ ಅಂಡರ್ಪಾಸ್ ಪ್ರದೇಶ ಅನೈತಿಕ ಚಟುವಟಿಕೆಗಳ ತಾಣವಾಗಿದ್ದುದಾಗಿ ಹಲವು ದೂರುಗಳು ಕೇಳಿಬಂದಿದ್ದವು. ಇದನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ. ಮೇಲ್ಸೇತುವೆ ಮೇಲೆ ನಡೆಯುತ್ತಿದ್ದ ಅಕ್ರಮ ಚಟುವಟಿಕೆಗಳು ಹಾಗೂ ಅಸಮರ್ಪಕ ಓಡಾಟಕ್ಕೂ ಕಡಿವಾಣ ಹಾಕಲಾಗಿದೆ.
ಇನ್ನು ಮುಂದೆ ಅಂಡರ್ಪಾಸ್ ಪ್ರದೇಶದಲ್ಲಿ ಯಾವುದೇ ರೀತಿಯ ವಸ್ತುಗಳನ್ನು ಮಾರಾಟ ಮಾಡಲು ಅವಕಾಶ ಇರುವುದಿಲ್ಲ. ಅಲ್ಲದೆ, ಭದ್ರತಾ ದೃಷ್ಟಿಯಿಂದ 5 ನಿಮಿಷಕ್ಕಿಂತ ಹೆಚ್ಚು ಸಮಯ ಯಾರೂ ಅಲ್ಲೇ ನಿಲ್ಲುವಂತಿಲ್ಲ ಎಂದು ಸೂಚಿಸಲಾಗಿದೆ.
ಸಾರ್ವಜನಿಕರ ಸುರಕ್ಷತೆಗಾಗಿ ಉಪ್ಪಾರಪೇಟೆ ಪೊಲೀಸರು ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿದ್ದು, ಮೂರು ಶಿಫ್ಟ್ಗಳಲ್ಲಿ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಈ ಕ್ರಮಗಳಿಂದ ಮೆಜೆಸ್ಟಿಕ್ ಪ್ರದೇಶದಲ್ಲಿ ಶಿಸ್ತು ಮತ್ತು ಭದ್ರತೆ ಹೆಚ್ಚಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
