Ashwaveega News 24×7 ಫೆಬ್ರವರಿ 09 -2026 – ಬೆಂಗಳೂರು : ಮೆಟ್ರೋ ಟಿಕೆಟ್ ದರ ಏರಿಕೆ ವಿಚಾರದಲ್ಲಿ ರಾಜ್ಯ ರಾಜಕಾರಣದಲ್ಲಿ ತೀವ್ರ ಜಟಾಪಟಿ ಶುರುವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಸಂಸದ ಕೆ. ಸುಧಾಕರ್ ಕಿಡಿಕಾರಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಮಾತನಾಡಿದ ಅವರು, “ರಾಜ್ಯ ಸರ್ಕಾರವೇ ಭಿಕ್ಷಾ ಪಾತ್ರೆ ಹಿಡಿದು ಕುಳಿತಂತಾಗಿದೆ. ಭಿಕ್ಷೆ ಬೇಡುವುದನ್ನು ಬಿಟ್ಟು ಇವರಿಗೆ ಇನ್ನೇನೂ ಮಾಡಲು ಆಗುತ್ತಿಲ್ಲ” ಎಂದು ವ್ಯಂಗ್ಯವಾಡಿದರು. ಮೆಟ್ರೋ ದರ ಏರಿಕೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಸುಧಾಕರ್, “ಮೆಟ್ರೋ ಟಿಕೆಟ್ ದರ ಏರಿಸಬೇಕು ಅಂತ ಪತ್ರ ಬರೆದವರು ಯಾರು? ಸುಧಾರಣೆ ಮಾಡೋಕೆ ಆಗ್ತಿಲ್ಲ ಅಂತ ಪತ್ರ ಬರೆದವರು ಯಾರು?” ಎಂದು ಪ್ರಶ್ನಿಸಿದರು.
“ಕಾಂಗ್ರೆಸ್ ಸರ್ಕಾರವೇ ಕೇಂದ್ರಕ್ಕೆ ಪತ್ರ ಬರೆದು ಮೆಟ್ರೋ ದರ ಏರಿಕೆಗೆ ಒತ್ತಾಯಿಸಿದೆ. ಈಗ ಮತ್ತೆ ಕೇಂದ್ರದ ಮೇಲೆ ಆರೋಪ ಮಾಡೋದು ಸರಿಯಲ್ಲ” ಎಂದು ಅವರು ಹೇಳಿದರು. ಇನ್ನು, “ನಾವು ಮೆಟ್ರೋ ಟಿಕೆಟ್ ದರ ಹೆಚ್ಚಿಗೆ ಮಾಡಬೇಡಿ ಅಂತಲೇ ಕೇಳ್ತಿದ್ದೇವೆ. ಸಾಮಾನ್ಯ ಜನರ ಮೇಲೆ ಹೊರೆ ಹಾಕಬಾರದು” ಎಂದು ಸಂಸದ ಕೆ. ಸುಧಾಕರ್ ಸ್ಪಷ್ಟಪಡಿಸಿದರು.
ಮೆಟ್ರೋ ದರ ಏರಿಕೆ ವಿಚಾರ ಇದೀಗ ರಾಜಕೀಯ ಕಾದಾಟಕ್ಕೆ ತಿರುಗಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರ ಮತ್ತಷ್ಟು ಬಿಗಿಯಾಗುವ ಲಕ್ಷಣಗಳು ಕಾಣಿಸುತ್ತಿವೆ.
