Ashwaveega News 24×7 ಮಾರ್ಚ್ 13– 2026 : ಬೆಂಗಳೂರು : ಗ್ಯಾಸ್ ಸಿಲಿಂಡರ್ ಕೊರತೆ ಹಿನ್ನೆಲೆಯಲ್ಲಿ ಹಲವೆಡೆ ಹೋಟೆಲ್ಗಳು ಮತ್ತು ರೆಸಾರ್ಟ್ಗಳು ಸೌದೆ ಒಲೆಗಳನ್ನು ಬಳಸುತ್ತಿರುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಕಟ್ಟೆಚ್ಚರ ವಹಿಸಿದೆ. ಸೌದೆಗೆ ಬೇಡಿಕೆ ಹೆಚ್ಚಿದ ಕಾರಣ ಅಕ್ರಮವಾಗಿ ಮರಗಳ ಕಡಿತ ನಡೆಯುವ ಸಾಧ್ಯತೆ ಇರುವುದರಿಂದ ಅರಣ್ಯ ಇಲಾಖೆ ಎಚ್ಚರಿಕೆಯಲ್ಲಿ ಇರಲು ಸೂಚಿಸಲಾಗಿದೆ .
ಅರಣ್ಯ, ಜೀವವೈವಿಧ್ಯ ಹಾಗೂ ಪರಿಸರ ಸಚಿವರಾದ Eshwar Khandre ಅವರು ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಪಷ್ಟ ಆದೇಶ ನೀಡಿದ್ದಾರೆ. ರಾಜ್ಯದ ಎಲ್ಲಾ ಅರಣ್ಯ ವಲಯಗಳಲ್ಲಿ ಗಸ್ತು ಹೆಚ್ಚಿಸಿ ಮರಗಳ ಕಡಿಯುವಿಕೆ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು .
ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಲಭ್ಯತೆ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಕೆಲವು ಹೋಟೆಲ್ಗಳು, ರೆಸಾರ್ಟ್ಗಳು ಮತ್ತು ವಾಣಿಜ್ಯ ಸಂಸ್ಥೆಗಳು ಸೌದೆ ಒಲೆಗಳನ್ನು ಬಳಸಲು ಆರಂಭಿಸಿರುವ ಮಾಹಿತಿ ಸರ್ಕಾರದ ಗಮನಕ್ಕೆ ಬಂದಿದೆ. ಇದರಿಂದ ಸೌದೆಗೆ ಬೇಡಿಕೆ ಹೆಚ್ಚಾಗಿ ಅಕ್ರಮವಾಗಿ ಮರಗಳನ್ನು ಕಡಿದು ಮಾರಾಟ ಮಾಡುವ ಪ್ರವೃತ್ತಿ ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ .
ಈ ಹಿನ್ನೆಲೆಯಲ್ಲಿ ಅರಣ್ಯ ಮತ್ತು ಸರ್ಕಾರಿ ಜಮೀನಿನಲ್ಲಿ ಯಾವುದೇ ರೀತಿಯ ಮರಗಳ ಕಡಿತ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅರಣ್ಯ ವಲಯಗಳಲ್ಲಿ ಗಸ್ತು ಹೆಚ್ಚಿಸಿ, ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿರಲು ಸೂಚಿಸಲಾಗಿದೆ .
ಸೌದೆಗಾಗಿ ಅಕ್ರಮವಾಗಿ ಮರಗಳನ್ನು ಕಡಿದರೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಜೊತೆಗೆ ಅರಣ್ಯ ಪ್ರದೇಶಗಳಲ್ಲಿ ಮರಗಳ ಕಡಿತ ನಡೆದರೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯೇ ಹೊಣೆಗಾರರಾಗುತ್ತಾರೆ ಎಂದು ಕೂಡ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ .
ಈ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಅರಣ್ಯ ಇಲಾಖೆ ತೀವ್ರ ನಿಗಾ ವಹಿಸಲು ಮುಂದಾಗಿದ್ದು, ಮರಗಳ ಸಂರಕ್ಷಣೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ .
