Ashwaveega News 24×7 ಮಾರ್ಚ್ 14– 2026 : ಆನ್ಲೈನ್ ವಾಣಿಜ್ಯ ಸಂಸ್ಥೆ ಫ್ಲಿಪ್ಕಾರ್ಟ್ನಲ್ಲಿ ₹1ಕ್ಕೆ 1 ಲೀಟರ್ ಹಾಲು ನೀಡುವ ಆಫರ್ ಕುರಿತು ವಿವಾದ ಭುಗಿಲೆದ್ದಿದೆ. ಈ ಬಗ್ಗೆ ಮಾಜಿ ಸಂಸದ ಡಿ.ಕೆ. ಸುರೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಆಫರ್ಗಳು ರೈತ ಸಮುದಾಯದ ಹಿತಾಸಕ್ತಿಗೆ ಧಕ್ಕೆಯುಂಟುಮಾಡುತ್ತವೆ ಎಂದು ಅವರು ಆರೋಪಿಸಿದ್ದಾರೆ. “ಹಣ ಮಾಡುವ ಭರದಲ್ಲಿ ರೈತರಿಗೆ ಬೆಂಕಿ ಹಚ್ಚುವ ಕೆಲಸ ಮಾಡಲಾಗುತ್ತಿದೆ. ರೈತ ಸಮುದಾಯವನ್ನು ಧ್ವಂಸ ಮಾಡುವ ಕೃತ್ಯಕ್ಕೆ ಕೈ ಹಾಕಲಾಗಿದೆ,” ಎಂದು ಅವರು ಕಿಡಿಕಾರಿದ್ದಾರೆ.
ಈ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಗಮನಹರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. “ಇದೇ ರೀತಿಯಲ್ಲಿ ಮುಂದುವರಿದರೆ ಫ್ಲಿಪ್ಕಾರ್ಟ್ ವಿರುದ್ಧ ದಂಗೆ ಏಳುವಂತಹ ಪರಿಸ್ಥಿತಿ ನಿರ್ಮಾಣವಾಗಬಹುದು,” ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಚಾರಕ್ಕಾಗಿ ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡುತ್ತಿರುವ ಕಂಪನಿಗಳು ರೈತರ ಹಿತಾಸಕ್ತಿಯನ್ನು ಕಡೆಗಣಿಸುತ್ತಿವೆ ಎಂದು ಅವರು ಆರೋಪಿಸಿದರು. ಈ ಸಂಬಂಧ ಸ್ಪರ್ಧಾ ಆಯೋಗವಾದ ಕಾಂಪಿಟೇಷನ್ ಕಮಿಷನ್ ಆಫ್ ಇಂಡಿಯಾಗೆ ದೂರು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
“₹1ಕ್ಕೆ 1 ಲೀಟರ್ ಹಾಲು ಕೊಡಲು ಹೇಗೆ ಸಾಧ್ಯ? ಈ ಆಫರ್ ಎಷ್ಟು ದಿನ ಮುಂದುವರಿಯುತ್ತದೆ ಎಂಬುದನ್ನು ಜಾಹೀರಾತಿನಲ್ಲಿ ಸ್ಪಷ್ಟಪಡಿಸಬೇಕು. ಅಧಿಕಾರಿಗಳ ಜೊತೆ ಮಾತನಾಡಿ ಅಧಿಕೃತವಾಗಿ ದೂರು ನೀಡುತ್ತೇವೆ,” ಎಂದು ಅವರು ಹೇಳಿದ್ದಾರೆ.
ದೇಶದಲ್ಲೇ ಕಾರ್ಯನಿರ್ವಹಿಸುವ ಸಂಸ್ಥೆಗಳು ರೈತರ ಹಿತಕ್ಕೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
