ರಾಜ್ಯದಲ್ಲಿ ಗೃಹ ಬಳಕೆದಾರರಿಗೆ ವಿದ್ಯುತ್ ಸ್ಥಿರ ಶುಲ್ಕವನ್ನು ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಪರಿಷತ್ತಿನಲ್ಲಿ ಸಭಾ ನಾಯಕ ಎನ್.ಎಸ್. ಬೋಸರಾಜು ಮಾಹಿತಿ ನೀಡಿದರು.
ಜೆಡಿಎಸ್ ಸದಸ್ಯ ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿದ್ಯುತ್ ದರ ಹೆಚ್ಚಳಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಕನಿಷ್ಠ 120 ದಿನಗಳ ಮುಂಚೆಯೇ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು. ನವೆಂಬರ್ 29ರಂದು ಸಲ್ಲಿಸಲಾದ ಪ್ರಸ್ತಾವನೆಯಲ್ಲಿ ಗೃಹ ಬಳಕೆದಾರರ ಸ್ಥಿರ ಶುಲ್ಕ ಹೆಚ್ಚಿಸುವ ಯಾವುದೇ ಉಲ್ಲೇಖ ಇಲ್ಲ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಎನ್.ಎಸ್. ಬೋಸರಾಜು, 2024-25ನೇ ಸಾಲಿನಲ್ಲಿ ರಾಜ್ಯದ ಆರು ಎಸ್ಕಾಂಗಳು ಒಟ್ಟು ₹45,016 ಕೋಟಿ ನಷ್ಟ ಅನುಭವಿಸಿವೆ . ಅದರಲ್ಲಿ ಬೆಸ್ಕಾಂ ಅತಿ ಹೆಚ್ಚು ₹2,802 ಕೋಟಿ ನಷ್ಟ ಅನುಭವಿಸಿದೆ .

ಪ್ರಸ್ತುತ ಈ ವಿಷಯವು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್ಸಿ) ಮುಂದೆ ಇರುವುದಾಗಿ ತಿಳಿಸಿದ ಅವರು, ನಷ್ಟ ಸರಿದೂಗಿಸುವ ಕುರಿತು ಆಯೋಗದ ನಿರ್ಧಾರಕ್ಕಾಗಿ ಸರ್ಕಾರ ಕಾಯುತ್ತಿದೆ ಎಂದರು.
ಇತರ ಎಸ್ಕಾಂಗಳಿಗಿಂತ ಬೆಸ್ಕಾಂ ಪ್ರತಿ ಯೂನಿಟ್ಗೆ ಸುಮಾರು ₹1 ಕಡಿಮೆ ದರ ವಿಧಿಸುತ್ತಿರುವುದು ನಷ್ಟಕ್ಕೆ ಪ್ರಮುಖ ಕಾರಣವಾಗಿದೆ. ಕೆಇಆರ್ಸಿ ಪ್ರತಿ ಯೂನಿಟ್ಗೆ ₹9.54 ನಿಗದಿ ಮಾಡಿದ್ದರೆ, ಬೆಸ್ಕಾಂ ಗ್ರಾಹಕರಿಂದ ₹8.59 ಮಾತ್ರ ವಸೂಲಿ ಮಾಡುತ್ತಿದೆ. ಇದರಿಂದ ₹1,678 ಕೋಟಿ ಆದಾಯದ ಕೊರತೆ ಉಂಟಾಗಿದೆ.
ಹಾಗೆಯೇ ವಿದ್ಯುತ್ ಖರೀದಿ ವೆಚ್ಚದಲ್ಲಿ ಕೂಡ ವ್ಯತ್ಯಾಸ ಕಂಡುಬಂದಿದ್ದು, ಕೆಇಆರ್ಸಿ ₹27,190 ಕೋಟಿ ವೆಚ್ಚವನ್ನು ನಿಗದಿ ಮಾಡಿದರೆ, ಬೆಸ್ಕಾಂ ₹27,895 ಕೋಟಿ ವೆಚ್ಚ ಮಾಡಿದ್ದು ₹706 ಕೋಟಿ ಹೆಚ್ಚುವರಿ ಭಾರವಾಗಿದೆ.

ಇದರ ಜೊತೆಗೆ ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆ ಅಡಿಯಲ್ಲಿ 1.65 ಕೋಟಿ ಕುಟುಂಬಗಳಿಗೆ ಈವರೆಗೆ ₹25,760 ಕೋಟಿ ವೆಚ್ಚ ಮಾಡಲಾಗಿದೆ ಎಂದು ಸಚಿವರು ಸದನಕ್ಕೆ ಮಾಹಿತಿ ನೀಡಿದರು .
