Ashwaveega News 24×7 ಏಪ್ರಿಲ್ 12 – 2026 : ಮಂಡ್ಯ : ರಾಜ್ಯ ರಾಜಕೀಯದಲ್ಲಿ ಕ್ಯಾಬಿನೆಟ್ ಪುನಾರಚನೆ ಚರ್ಚೆ ಗರಿಗೆದರಿರುವ ನಡುವೆ, Indian National Congress ಶಾಸಕರ ಅಸಮಾಧಾನ ಬಹಿರಂಗವಾಗಿದೆ. ಕೆಲ ಸಚಿವರ ಕಾರ್ಯವೈಖರಿಯನ್ನು ಪ್ರಶ್ನಿಸಿ ಶಾಸಕ Ravikumar Ganiga ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸಚಿವರು ದೇವಲೋಕದಿಂದ ಬಂದಿದ್ದಾರಾ? ಫೋನ್ ಮಾಡಿದ್ರೂ ಸಿಗಲ್ಲ” ಎಂದು ಕಿಡಿಕಾರಿದ ಅವರು, “ಕೆಲ ಸಚಿವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಜನರ ಕೈಗೆ ಸಿಗುವುದೇ ಇಲ್ಲ, ಅಭಿವೃದ್ಧಿ ಕೆಲಸಗಳಿಗೂ ಅಡ್ಡಿಯಾಗುತ್ತಿದ್ದಾರೆ” ಎಂದು ಆರೋಪಿಸಿದರು.
ಹೊಸದಾಗಿ ಶಾಸಕರಾದವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಆಗ್ರಹವನ್ನು ಪುನರುಚ್ಚರಿಸಿದ ಗಣಿಗ, “ನಮ್ಮ ಆಗ್ರಹದಲ್ಲಿ ಯಾವುದೇ ಬದಲಾವಣೆ ಇಲ್ಲ. ಇಂತಹ ಸಚಿವರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ಕೊಡಬೇಕು” ಎಂದು ಹೇಳಿದ್ದಾರೆ.
ಇದೇ ವೇಳೆ, “ನನಗೆ ವೈಯಕ್ತಿಕವಾಗಿ ಸಚಿವ ಸ್ಥಾನ ಬೇಕೆಂಬ ಆಸೆ ಇಲ್ಲ. ಆದರೆ ಹಲವು ಶಾಸಕರು ಸಚಿವರಾಗಲು ಬಯಸುತ್ತಿದ್ದಾರೆ . ಅವರಿಗೆ ಅವಕಾಶ ಸಿಗಬೇಕು” ಎಂದು ಸ್ಪಷ್ಟಪಡಿಸಿದರು.
ಇನ್ನಷ್ಟು ವಿವರ ನೀಡಿದ ಅವರು, “ಈ ಸಂಬಂಧ ನಾನು ಸೇರಿ 38 ಶಾಸಕರು ಈಗಾಗಲೇ ಪತ್ರ ಬರೆದಿದ್ದೇವೆ. ಕನಿಷ್ಠ ಐವರು ಹೊಸಬರಿಗೆ ಮಂತ್ರಿಗಿರಿ ನೀಡಬೇಕು ಎಂದು ಕೇಳಿದ್ದೇವೆ” ಎಂದು ಹೇಳಿದರು.
ಹಿರಿಯ ಶಾಸಕರು ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಮಾತುಕತೆ ನಡೆಸುತ್ತಿರುವ ಸಂದರ್ಭದಲ್ಲಿ, ಈ ಹೇಳಿಕೆಗಳು ಮತ್ತಷ್ಟು ಒತ್ತಡ ಹೆಚ್ಚಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಮತ್ತು ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಗಣಿಗ ಒತ್ತಾಯಿಸಿದ್ದಾರೆ.
