Ashwaveega News 24×7 ಮಾರ್ಚ್ 12– 2026 : ಬೆಂಗಳೂರು : ಬಜೆಟ್ ಅಧಿವೇಶನದ ನಡುವೆಯೇ ಕಾಂಗ್ರೆಸ್ ಪಕ್ಷದ ಶಾಸಕರ ಅಸಮಾಧಾನ ಮತ್ತೆ ಹೊರಹೊಮ್ಮಿದೆ. ಸಿಎಲ್ಪಿ ಸಭೆಯಲ್ಲಿ ಕೆಲ ಸಚಿವರ ಕಾರ್ಯವೈಖರಿ ಕುರಿತು ಕಾಂಗ್ರೆಸ್ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡಲು ಸಚಿವರನ್ನು ಸಂಪರ್ಕಿಸಿದರೂ ಸ್ಪಂದನೆ ಸಿಗುವುದಿಲ್ಲ ಎಂದು ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧಿವೇಶನದ ವೇಳೆಯಲ್ಲೂ ಕೆಲ ಸಚಿವರು ಸದನಕ್ಕೆ ಸರಿಯಾಗಿ ಹಾಜರಾಗುವುದಿಲ್ಲ, ಸಿಎಲ್ಪಿ ಸಭೆಗಳಲ್ಲೂ ಕಾಣಿಸಿಕೊಳ್ಳುವುದಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
“ನಾವು ಪದೇಪದೇ ಈ ವಿಷಯವನ್ನು ಹೇಳುತ್ತಿದ್ದರೂ ಯಾರೂ ಗಮನ ಕೊಡುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಸಚಿವರ ವಿರುದ್ಧ ಸಾರ್ವಜನಿಕವಾಗಿ ಮಾತನಾಡಬೇಕಾಗುತ್ತದೆ,” ಎಂದು ಕೆಲವು ಶಾಸಕರು ಸಭೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ (ಡಿಸಿ) ಮತ್ತು ಪೊಲೀಸ್ ಅಧೀಕ್ಷಕ (ಎಸ್ಪಿ) ನೇಮಕ ಹಾಗೂ ವರ್ಗಾವಣೆ ವಿಷಯದಲ್ಲಿಯೂ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಶಾಸಕರೊಂದಿಗೆ ಕನಿಷ್ಠ ಸೌಜನ್ಯಕ್ಕೂ ಮಾತುಕತೆ ನಡೆಸದೆ ಕೆಲ ಸಚಿವರು ಹಾಗೂ ಪ್ರಭಾವಿಗಳ ಮಾತು ಕೇಳಿ ಅಧಿಕಾರಿಗಳ ವರ್ಗಾವಣೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಇದರಿಂದ ಕ್ಷೇತ್ರದಲ್ಲಿ ಜನಪ್ರತಿನಿಧಿಗಳಾಗಿ ನಮ್ಮ ಗೌರವ ಕುಗ್ಗುತ್ತಿದೆ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ. “ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ನಾವು ಕೇಳಿದರೂ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಆದರೆ ವಿರೋಧ ಪಕ್ಷದ ನಾಯಕರ ಕೆಲಸಗಳನ್ನು ಡಿಸಿ ಮತ್ತು ಎಸ್ಪಿಗಳು ಮಾಡಿಕೊಡುತ್ತಿದ್ದಾರೆ,” ಎಂದು ಕೆಲ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಗಳು ಕಾಂಗ್ರೆಸ್ ಪಕ್ಷದೊಳಗಿನ ಅಸಮಾಧಾನ ಮತ್ತೊಮ್ಮೆ ಹೊರಹೊಮ್ಮುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಬಜೆಟ್ ಅಧಿವೇಶನ ನಡೆಯುತ್ತಿರುವ ಈ ಸಂದರ್ಭದಲ್ಲಿ ಪಕ್ಷದೊಳಗಿನ ಅಸಮಾಧಾನ ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಮುಂದುವರಿಯುತ್ತದೆ ಎಂಬುದು ಕುತೂಹಲ ಮೂಡಿಸಿದೆ.
