Ashwaveega News 24×7 ಫೆಬ್ರವರಿ 03 -2026 : ಉಚಿತವಾಗಿ ಮೋಮೋಸ್ ತಿನ್ನುವ ಆಸೆಗೆ ಬಿದ್ದು ಅಪ್ರಾಪ್ತ ಬಾಲಕನೊಬ್ಬ ₹85 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಬೀದಿಬದಿ ವ್ಯಾಪಾರಿಗಳಿಗೆ ನೀಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ದುಮ್ಮಿ ಚೌರಾಹೋ ಪ್ರದೇಶದಲ್ಲಿ ಈ ಶಾಕ್ ಮಾಡುವ ಘಟನೆ ನಡೆದಿದ್ದು, ಮೋಮೋಸ್ ಶಾಪ್ ನಡೆಸುತ್ತಿದ್ದ ಮೂವರು ವ್ಯಾಪಾರಿಗಳು ಬಾಲಕನನ್ನು ಮೋಸಗೊಳಿಸಿರುವ ಆರೋಪ ಕೇಳಿಬಂದಿದೆ.
ಮೋಮೋಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಾಪಾರಿಗಳು, “ಆಭರಣ ತಂದು ಕೊಟ್ಟರೆ ಉಚಿತವಾಗಿ ಎಷ್ಟು ಬೇಕಾದರೂ ಮೋಮೋಸ್ ತಿನ್ನಬಹುದು” ಎಂದು ಬಾಲಕನಿಗೆ ಆಮಿಷ ಒಡ್ಡಿದ್ದಾರೆ ಅಂತೆ . ಈ ಮಾತಿಗೆ ಮಾರುಹೋಗಿದ್ದ ಬಾಲಕ, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ತೆಗೆದುಕೊಂಡು ಬಂದು ವ್ಯಾಪಾರಿಗಳಿಗೆ ನೀಡಿದ್ದಾನೆ.
ಮೋಮೋಸ್ ಮೇಲಿನ ಆಸೆಯಿಂದಾಗಿ ಬಾಲಕ ಬರೋಬ್ಬರಿ ₹85 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಅಂಗಡಿಗೆ ತಂದು ಕೊಟ್ಟಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಇದಲ್ಲದೆ, ಇನ್ನಷ್ಟು ಆಭರಣ ತರಲು ಬಾಲಕ ತನ್ನ ಸಹೋದರಿಗೂ ಹೇಳಿದ್ದಾನೆ ಎನ್ನಲಾಗಿದೆ.
ಸಹೋದರಿ ಪ್ರಶ್ನಿಸಿದಾಗ ಅನುಮಾನ ಮೂಡಿದ್ದು, ಈ ವಿಚಾರವನ್ನು ಪೋಷಕರ ಗಮನಕ್ಕೆ ತಂದಿದ್ದಾಳೆ. ಮನೆ ಪರಿಶೀಲನೆ ನಡೆಸಿದಾಗ ದೊಡ್ಡ ಪ್ರಮಾಣದಲ್ಲಿ ಚಿನ್ನಾಭರಣಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಬಾಲಕನ ತಂದೆ ವಿಮೇಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಮೋಮೋಸ್ ಶಾಪ್ ನಡೆಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರು ಆರೋಪಿಗಳಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು, ಈ ಘಟನೆ ಮಕ್ಕಳನ್ನು ಗುರಿಯಾಗಿಸಿಕೊಂಡು ನಡೆಯುವ ಮೋಸದ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದೆ.
