
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರೊಂದಿಗೆ ವಿವಾಹವಾಗಿದ್ದಾರೆ. ಗುರುವಾರ ಕನಕಪುರ ರಸ್ತೆಯ ರೆಸಾರ್ಟ್ನಲ್ಲಿ ನಡೆದ ಸರಳ ವಿವಾಹದಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರು ಭಾಗವಹಿಸಿದ್ದರು . ಇಂದು ಸಂಸದ ತೇಜಸ್ವಿ ಸೂರ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ರೆಸಾರ್ಟ್ನಲ್ಲಿ ತೇಜಸ್ವಿ ಸೂರ್ಯ ಮತ್ತು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಮದುವೆಗೆ ಎರಡು ಕುಟುಂಬದ ಸದಸ್ಯರು ಮತ್ತು ಅತ್ಯಾಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಬುಧವಾರ ಸಂಜೆಯಿಂದಲೇ ವರಪೂಜೆ ಸೇರಿದಂತೆ ಮದುವೆ ಶಾಸ್ತ್ರಗಳು ನಡೆದಿದ್ಗವು. ಇಂದು ಬೆಳಗ್ಗೆ 10.45 ತುಲಾ ಲಗ್ನದಲ್ಲಿ ಶಿವಶ್ರಿ ಕೊರಳಿಗೆ ತೇಜಸ್ವಿ ಸೂರ್ಯ ಮಾಂಗಲ್ಯಧಾರಣೆ ಮಾಡಿದ್ದಾರೆ. ಇಂದೇ ಶಿವಶ್ರೀ ಅವರನ್ನು ಮನೆ ತುಂಬಿಸಿಕೊಳ್ಳುವ ಶಾಸ್ತ್ರ ನಡೆಯಲಿದೆ. ಮದುವೆಗೆ ಕೇಂದ್ರ ಸಚಿವ ವಿ,ಸೋಮಣ್ಣ , ಬಿ. ವೈ ವಿಜಯೇಂದ್ರ ತೆರಳಿ ನವಜೋಡಿಗೆ ಆಶೀರ್ವದಿಸಿದ್ದಾರೆ.

ಬೆಂಗಳೂರಲ್ಲಿ ನಡೆದ ಏರೋ ಶೋಗೂ ಸಹ ಭಾವೀ ಪತ್ನಿಯೊಂದಿಗೆ ಸಂಸದ ತೇಜಸ್ವಿ ಸೂರ್ಯ ಆಗಮಿಸಿದ್ದರು. ನಂತರ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದರು. ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅನೇಕ ರಾಜಕೀಯ ಮುಖಂಡರು, ಗಣ್ಯರು ವಿವಾಹ ಸಮಾರಂಭಕ್ಕೆ ಸಾಕ್ಷಿಯಾದರು. ಶಿವಶ್ರೀ ಸ್ಕಂದಪ್ರಸಾದ್ ಮತ್ತು ತೇಜಸ್ವಿ ಸೂರ್ಯ ಸರಳ ಮತ್ತು ಸಾಂಪ್ರದಾಯಿಕ ಉಡುಪುಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದರು. ಮಾರ್ಚ್ 9 ರಂದು ಬೆಂಗಳೂರಿನ ಗಾಯತ್ರಿ ವಿಹಾರ್ ಮೈದಾನದಲ್ಲಿ ಭವ್ಯವಾದ ಆರತಕ್ಷತೆ ನಡೆಯಲಿದೆ ಎಂದು ತೇಜಸ್ವಿ ಸೂರ್ಯ ಕುಟುಂಬದ ಮೂಲಗಳು ತಿಳಿಸಿವೆ. ಮಾರ್ಚ್ 9ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದ ಪ್ರಸಾದ್ ಆರತಕ್ಷತೆ ನಡೆಯಲಿದೆ. ಈ ವೇಳೆ ರಾಜ್ಯ-ದೇಶದ ರಾಜಕೀಯ ಗಣ್ಯರು ಭಾಗಿಯಾಗುವ ಸಾಧ್ಯತೆಗಳಿವೆ.
ಶಿವಶ್ರೀ ಸ್ಕಂದಪ್ರಸಾದ್ ಪ್ರಸಿದ್ಧ ಕರ್ನಾಟಕ ಸಂಗೀತ ಗಾಯಕಿ ಮತ್ತು ಚೆನ್ನೈನ ಭರತನಾಟ್ಯಂ ಕಲಾವಿದೆ. 1996 ರ ಆಗಸ್ಟ್ 1 ರಂದು ಜನಿಸಿದ ಅವರು, ಮೃದಂಗ ಕಲಾವಿದ ಸೀರ್ಕಾಳಿ ಶ್ರೀ ಜೆ ಸ್ಕಂದಪ್ರಸಾದ್ ಅವರ ಪುತ್ರಿ. ಅವರು (SASTRA) ಶಾಸ್ತ್ರ ವಿಶ್ವವಿದ್ಯಾಲಯದಿಂದ ಬಯೋ ಎಂಜಿನಿಯರಿಂಗ್ನಲ್ಲಿ ಪದವಿ ಮಾಡಿದ್ದಾರೆ . ಭ್ರೂಣದ ದೋಷಗಳ ಬಗ್ಗೆಯೂ ಅಧ್ಯಯನ ಮಾಡಿದ್ದಾರೆ. ಅಲ್ಲದೆ, PVA ಆಯುರ್ವೇದ ಆಸ್ಪತ್ರೆಯಿಂದ ಆಯುರ್ವೇದ ಕಾಸ್ಮೆಟಾಲಜಿಯಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಪಡೆದಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಸಾಂಪ್ರದಾಯಿಕವಾಗಿ ವಿವಾಹ ಕಾರ್ಯಕ್ರಮ ನಡೆಯಲಿದೆ. ತಮಿಳುನಾಡು ಮೂಲದ ಶಿವಶ್ರೀ ಅವರು ಈಗಾಗಲೇ ಗಾಯನದಿಂದ ಖ್ಯಾತರಾಗಿದ್ದಾರೆ. ಇತ್ತೀಚೆಗೆ ಆರ್ಟ್ ಆಫ್ ಲಿವಿಂಗ್ನಲ್ಲಿ ನಡೆದ ಕಾರ್ಯಕ್ರಮದ ವೇಳೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಶಿವಶ್ರೀ ಅವರು ಗಾಯನವಲ್ಲದೆ ಭರತನಾಟ್ಯ ಕಲಾವಿದೆ ಕೂಡ ಹೌದು. ಮದ್ರಾಸ್ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಪದವಿಯನ್ನೂ ಗಳಿಸಿದ್ದಾರೆ. ಆಯೋಧ್ಯೆ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಶಿವಶ್ರೀ ಅವರು ಹಾಡಿದ ರಾಮನ ಕುರಿತ ಗೀತೆಯನ್ನು ಮೆಚ್ಚಿ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.