Ashwaveega News 24×7 ಫೆಬ್ರವರಿ 05 -2026 – ಮಂಡ್ಯ: “ನಿಖಿಲ್ ಕುಮಾರಸ್ವಾಮಿ ಮಂಡ್ಯ ತಂಟೆಗೆ ಬರಬೇಡ” ಎಂದು ಹಾಸನದ ಮಾಜಿ ಶಾಸಕ ಪ್ರೀತಂ ಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಯೊಳಗಿನ ಭಿನ್ನಮತ ಬಹಿರಂಗವಾಗಿ ಸ್ಫೋಟಗೊಂಡಿದ್ದು, ಕೆ.ಆರ್.ಪೇಟೆ ಕ್ಷೇತ್ರದ ಅಭ್ಯರ್ಥಿ ಘೋಷಣೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣಗೌಡ ಅವರನ್ನು ಘೋಷಿಸಿರುವುದಾಗಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಕಟಣೆ ನೀಡಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್ನ ಹಾಲಿ ಶಾಸಕ ಇದ್ದರೂ ಬಿಜೆಪಿ ಅಭ್ಯರ್ಥಿ ಘೋಷಿಸಿರುವುದು ಜೆಡಿಎಸ್ಗೆ ದೊಡ್ಡ ಶಾಕ್ ಆಗಿದೆ.
ಈ ನಡುವೆ, ನಿಖಿಲ್ ಕುಮಾರಸ್ವಾಮಿ ಅವರು ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಎಂಎಲ್ಎ ಮಂಜು ಮುಂದಿನ ಅಭ್ಯರ್ಥಿ ಎಂದು ಘೋಷಿಸಿದ್ದರು. ಆದರೆ ಬಿಜೆಪಿ ಜೊತೆ ಯಾವುದೇ ಚರ್ಚೆ ನಡೆಸದೇ ಈ ಘೋಷಣೆ ಮಾಡಿರುವುದನ್ನು ಪ್ರೀತಂ ಗೌಡ ಕಟುವಾಗಿ ಟೀಕಿಸಿದ್ದಾರೆ.
“ಅಭ್ಯರ್ಥಿ ಘೋಷಣೆ ಮಾಡಲು ನಿಖಿಲ್ ಕುಮಾರಸ್ವಾಮಿ ಯಾರು ?” ಎಂದು ಪ್ರಶ್ನಿಸಿರುವ ಪ್ರೀತಂ ಗೌಡ, “ಟಿಕೆಟ್ ವಿಚಾರದಲ್ಲಿ ಮಾತಾಡಬೇಡ ಎಂದು ನಿಖಿಲ್ಗೆ ಎಚ್ಚರಿಕೆ ನೀಡಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮೂಲಕ ನಿಖಿಲ್ ಕುಮಾರಸ್ವಾಮಿ ಮತ್ತು ಪ್ರೀತಂ ಗೌಡ ನಡುವೆ ನೇರ ಟಕ್ಕರ್ ಆರಂಭವಾಗಿದ್ದು, ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಯ ಭವಿಷ್ಯ ಪ್ರಶ್ನಾರ್ಥಕವಾಗಿ ಪರಿಣಮಿಸಿದೆ.
