Ashwaveega News 24×7 ಜನವರಿ 08: ಬಳ್ಳಾರಿ ಬ್ಯಾನರ್ ಫೈರಿಂಗ್ ಘಟನೆಯ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ಈ ಪ್ರಕರಣವನ್ನು ತನಿಖೆ ಮಾಡುವ ಸಾಮಾರ್ಥ್ಯ ನಮ್ಮ ಪೊಲೀಸರಿಗೆ ಇದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪೊಲೀಸರಿಗೆ ತನಿಖೆ ಮಾಡಲು ಆಗುವುದಿಲ್ಲ ಎಂಬ ಸಂದರ್ಭ ಬಂದರೆ ಸಿಬಿಐಗೆ ನೀಡುವ ಬಗ್ಗೆ ಮಾತನಾಡಬಹುದು. ಈಗಾಗಲೇ ಯಾವುದೇ ಪ್ರಕರಣಗಳನ್ನು ಸಿಬಿಐಗೆ ನೀಡುವುದಿಲ್ಲ ಎಂದು ಕ್ಯಾಬಿನೆಟ್ನಲ್ಲಿ ತೀರ್ಮಾನ ಮಾಡಲಾಗಿದೆ. ಸಿಬಿಐಗೆ ಕೊಡುವ ಅಗತ್ಯತೆಯೂ ಇಲ್ಲ ಎಂದು ಹೇಳಿದರು.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು. ಕೇಂದ್ರದಲ್ಲಿ ಬೃಹತ್ ಕೈಗಾರಿಕೆ ಸಚಿವರಾಗಿದ್ದಾರೆ. ನನ್ನ ಬಗ್ಗೆ ವೈಯಕ್ತಿಕವಾಗಿ ಹೇಳಿಕೆ ಕೊಟ್ಟಿದ್ದಾರೆ. ನಾನು ಅವರ ಬಗ್ಗೆ ನಾನು ಏನು ಬೇಕಾದರೂ ಮಾತನಾಡಬಹುದು. ಅವರು ಬಹಳ ಜವಾಬ್ದಾರಿಯುತವಾಗಿ ಹೇಳಿಕೆ ಕೊಟ್ಟಿದ್ದಾರೆ ಎಂದು ಭಾವಿಸುತ್ತೇನೆ. ಅದನ್ನು ಸ್ವೀಕಾರ ಮಾಡುತ್ತೇನೆ ಎಂದು.
ರಾಜ್ಯದಲ್ಲಿ ಕಾನೂನು ವ್ಯವಸ್ಥೆಯನ್ನು ಯಾವ ರೀತಿ ಆಡಳಿತ ಮಾಡಬೇಕು ಎಂಬ ಅರಿವು ನನಗಿದೆ ಎಂದು ಅವರಿಗೆ ಹೇಳಬಯಸುತ್ತೇನೆ. 38 ವರ್ಷ ರಾಜಕಾರಣದಲ್ಲಿದ್ದೇನೆ. ಅನೇಕ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ಕುಮಾರಸ್ವಾಮಿಯವರ ಜೊತೆಗೂ ಕೆಲಸ ಮಾಡಿದ್ದೇನೆ. ಹಾಗಾಗಿ ನನ್ನ ಸಾಮಾರ್ಥ್ಯ ಮತ್ತು ವ್ಯಕ್ತಿತ್ವನೂ ಅವರಿಗೆ ಗೊತ್ತಿದೆ. ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.
ಹುಬ್ಬಳ್ಳಿ ಘಟನೆಯ ಬಗ್ಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ. ನಾವು ಮಹಿಳೆಯನ್ನು ವಿವಸ್ತ್ರಗೊಳಿಸಿಲ್ಲ. ಅರೆಸ್ಟ್ ಮಾಡುವ ಸಂದರ್ಭದಲ್ಲಿ ಮಹಿಳೆಯೇ ಆ ರೀತಿ ಮಾಡಿಕೊಂಡಿದ್ದಾರೆ ಎನ್ನುವ ಸ್ಪಷ್ಟನೆಯನ್ನು ಕಮಿಷನರ್ ನೀಡಿದ್ದಾರೆ. ಕಮಿಷನರ್ ಸ್ಪಷ್ಟಪಡಿಸಿದ ಮೇಲೆ ಅದಕ್ಕಿಂತ ಇನ್ನೇನು ಬೇಕಾಗಿದೆ ಎಂದರು.
ಎಲ್ಲದರಲ್ಲೂ ರಾಜಕೀಯ ಮಾಡುವುದು ಒಳ್ಳೆಯದಲ್ಲ. ಹೆಣ್ಣುಮಗಳ ವಿಚಾರವನ್ನು ಕೈಗೆತ್ತಿಕೊಂಡು ರಾಜಕೀಯ ಮಾಡುವುದು ಸರಿ ಕಾಣುವುದಿಲ್ಲ ಎಂದು ಹೇಳಿದರು.
ಯಾವ ಪಕ್ಷದವನ್ನು ಅವರ ರಾಜಕೀಯ ಪಕ್ಷದ ಹಿನ್ನೆಲೆಯಲ್ಲಿ ಟಾರ್ಗೆಟ್ ಮಾಡುವುದಿಲ್ಲ. ಪೊಲೀಸರು ಆ ರೀತಿ ಕೆಲಸ ಮಾಡಲು ಸಾಧ್ಯವಿಲ್ಲ, ಮಾಡಕೂಡದು. ಇದಕ್ಕೆ ಯಾವುದೇ ಅವಕಾಶಗಳನ್ನು ಕೊಡುವುದಿಲ್ಲ. ಯಾವುದೇ ರಾಜಕೀಯ ದುರುದ್ದೇಶದಿಂದ ಪೊಲೀಸರು ನಡೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
