Ashwaveega News 24×7 ಮಾರ್ಚ್ 08 – 2026 : ಇಸ್ಲಾಮಾಬಾದ್ : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಹೆಚ್ಚುತ್ತಿರುವ ನಡುವೆ, ಮುಸ್ಲಿಂ ರಾಷ್ಟ್ರಗಳ ನಡುವಿನ ಯುದ್ಧ ಭೀತಿ ಮತ್ತಷ್ಟು ಗಂಭೀರವಾಗುತ್ತಿದೆ. ಈ ಸಂದರ್ಭದಲ್ಲಿ ಸೌದಿ ಅರೇಬಿಯಾದ ಪರವಾಗಿ ಪಾಕಿಸ್ತಾನ ಯುದ್ಧಕ್ಕೆ ಸಜ್ಜಾಗುತ್ತಿದೆಯೇ ಎಂಬ ಪ್ರಶ್ನೆ ಎದುರಾಗಿದೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಇತ್ತೀಚೆಗೆ ಸೌದಿ ಅರೇಬಿಯಾಗೆ ಭೇಟಿ ನೀಡಿ ಅಲ್ಲಿನ ರಕ್ಷಣಾ ಸಚಿವ ಪ್ರಿನ್ಸ್ ಖಾಲಿದ್ ಬಿನ್ ಸಲ್ಮಾನ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಭೇಟಿಯಲ್ಲಿ ಪ್ರಾದೇಶಿಕ ಭದ್ರತೆ ಹಾಗೂ ಇರಾನ್ನಿಂದ ಸಂಭವಿಸಬಹುದಾದ ದಾಳಿಯನ್ನು ತಡೆಗಟ್ಟುವ ವಿಚಾರಗಳ ಕುರಿತು ಚರ್ಚೆ ನಡೆದಿದೆ .
ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವೆ ಈಗಾಗಲೇ ರಕ್ಷಣಾ ಸಹಕಾರ ಒಪ್ಪಂದವಿದ್ದು , ಉಭಯ ದೇಶಗಳ ಭದ್ರತೆಗೆ ಅಪಾಯ ಉಂಟಾದಲ್ಲಿ ಪರಸ್ಪರ ನೆರವಾಗಬೇಕು ಎಂಬ ಅಂಶವೂ ಅದರಲ್ಲಿ ಸೇರಿದೆ . ಕಳೆದ ವರ್ಷವೇ ಈ ಒಪ್ಪಂದವನ್ನು ಬಲಪಡಿಸಲಾಗಿತ್ತು.
ಈ ಹಿನ್ನೆಲೆದಲ್ಲಿ ಇರಾನ್ ವಿರುದ್ಧದ ಸಂಘರ್ಷ ಪರಿಸ್ಥಿತಿ ಉಂಟಾದಲ್ಲಿ ಪಾಕಿಸ್ತಾನ ಸೌದಿ ಅರೇಬಿಯಾಗೆ ಸೈನಿಕ ನೆರವು ನೀಡುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ .
ಆದರೆ ಪಾಕಿಸ್ತಾನವು ಇರಾನ್ ಜೊತೆ ದೀರ್ಘ ಗಡಿ ಹೊಂದಿರುವುದರಿಂದ, ಸೌದಿ ಅರೇಬಿಯಾ ಪರವಾಗಿ ಯುದ್ಧಕ್ಕೆ ಇಳಿದರೆ ಪಾಕಿಸ್ತಾನವೇ ದಾಳಿಯ ಗುರಿಯಾಗುವ ಅಪಾಯವೂ ಇದೆ. ಹೀಗಾಗಿ ರಕ್ಷಣಾ ಒಪ್ಪಂದದ ಕಾರಣದಿಂದ ಪಾಕಿಸ್ತಾನ ಕಷ್ಟಕರ ಪರಿಸ್ಥಿತಿಗೆ ಸಿಲುಕುವ ಸಾಧ್ಯತೆ ಇದೆ .
